ಶಿವಮೊಗ್ಗ: ಕಾಮಗಾರಿಯೊಂದರ ಬಿಲ್ ಬಿಡುಗಡೆಗಾಗಿ ಲಂಚ ಪಡೆಯುತ್ತಿದ್ದ ವೇಳೆ ಸೊರಬ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ ಎಚ್.ನಾಗರಾಳ ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ, ಸೊರಬ ತಾಲ್ಲೂಕಿನ ಹಸವಿ ಗ್ರಾಮದ ಲಿಂಗರಾಜ ಉಳ್ಳಾಗಡ್ಡಿ ಅವರು ಚೀಲನೂರು ಹಾಗೂ ಕಣ್ಣೂರು ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಪಿಎಂಶ್ರೀ ಯೋಜನೆಯಡಿ ಎಣ್ಣೆಕೊಪ್ಪ ಗ್ರಾಮದ ಶಾಲೆಯ ದುರಸ್ತಿ ಕಾಮಗಾರಿ ಕೈಗೊಂಡಿದ್ದರು. ಅದರ ಬಿಲ್ ಒಟ್ಟು ₹ 77,59,437 ಬಿಡುಗಡೆಯಾಗಬೇಕಿತ್ತು.
ಬಿಲ್ ಬಿಡುಗಡೆ ಮಾಡಲು ಶೇ 3ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದ ಪರಶುರಾಮ ನಾಗರಾಳ, ಗುತ್ತಿಗೆದಾರರಿಂದ ಈಗಾಗಲೇ ₹ 1, 63 ಲಕ್ಷ ಪಡೆದಿದ್ದರು. ಇನ್ನೂ ₹ 70,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಲಿಂಗರಾಜ ಉಳ್ಳಾಗಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ₹ 30,000 ನೀಡುವಾಗ ದಾಳಿ ನಡೆದಿದೆ.
ಲೋಕಾಯುಕ್ತ ಎಸ್‌ಪಿ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್, ಇನ್‌ಸ್ಪೆಕ್ಟರ್‌ಗಳಾದ ಕೆ.ಪಿ.ರುದ್ರೇಶ್, ಗುರುರಾಜ್ ಮೈಲಾರ್ ಹಾಗೂ ವೀರಬಸಪ್ಪ ಕುಸಲಾಪುರ ನೇತೃತ್ವದ ತಂಡ ಸೋಮವಾರ ಕಾರ್ಯಾಚರಣೆ ನಡೆಸಿದ್ದು, ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿರುವ ಔಷಧ ಅಂಗಡಿಯೊಂದರ ಎದುರು ಲಂಚದ ಹಣ ಪಡೆಯುವಾಗ ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.