ರಿಪ್ಪನ್‌ಪೇಟೆ: ಬಾಲ್ಯದಲ್ಲಿಯೇ ವೇದಾಧ್ಯಯನ ಪರಾಂಗತರಾಗಿ ಹಿಂದೂ ಧರ್ಮ ಬೋಧನೆಗಾಗಿ ವಿಶ್ವ ಪರ್ಯಟನೆ ಮಾಡಿದ ಶಂಕರಾಚಾರ್ಯರ ಧರ್ಮ ಬೋಧನೆ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ವಿದ್ವಾನ್ ಹಂಸಗಾರ ಭಾಸ್ಕರ ಶರ್ಮ ಅಭಿಪ್ರಾಯಪಟ್ಟರು.
ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಹಿನ್ನೆಲೆಯ ನಾಗರಹಳ್ಳಿ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವ ಹಾಗೂ ನಾಗೇಂದ್ರ ಸ್ವಾಮಿಯ 14ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರಮೇಶ್ವರನ ಪ್ರತಿರೂಪವಾಗಿ ಶಂಕರಾಚಾರ್ಯರ ಧಾರ್ಮಿಕ ಚಿಂತನೆಗಳು ಮನುಕುಲದ ಏಳಿಗೆಗೆ ಪೂರಕವಾಗಿವೆ. ಸಮಷ್ಠಿ ಭಾವದಿಂದ ಗ್ರಾಮ ದೇವರುಗಳ ಆರಾಧನೆಯಲ್ಲಿ ತೊಡಗಿ, ಸತ್ಯ, ಸಂಯಮ, ಸದ್ಭಾವ, ಸಾಧನೆ, ಸಾಕ್ಷಾತ್ಕಾರ, ಸರ್ವ ಸಿದ್ಧಿ ಮೂಲಕ ಮೋಕ್ಷ ಮಾರ್ಗ ಕಂಡುಕೊಳ್ಳಬೇಕು’ ಎಂದು ಹೇಳಿದರು.
ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ವಿದ್ವಾನ್ ಹಂಸಗಾರ ಭಾಸ್ಕರ ಶರ್ಮ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ್ ಭಟ್ ಹಾಗೂ ಪುರೋಹಿತ ಬಳಗದವರಿಂದ ನೆರವೇರಿದವು.
ನಾಗರಹಳ್ಳಿ ದೇವಸ್ಥಾನದ ಮಹಾದ್ವಾರ ಕಲಶಸ್ಥಾಪನೆ ಮತ್ತು ದೇವಸ್ಥಾನದಲ್ಲಿ ಕ್ಷೇತ್ರಪಾಲನ ಪ್ರತಿಷ್ಠಾಪನೆ ಕಾರ್ಯ ನಡೆದವು.
ದಾನಿಗಳಾದ ರವಿ, ಕಾರಕ್ಕಿ ಗಣೇಶ ಕುಟುಂಬ ವರ್ಗ, ಕಾಗೆಮರಡು ಮಂಜಣ್ಣ ಕುಟುಂಬ ವರ್ಗದವರನ್ನು ದೇವಸ್ಥಾನ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.