ಪ್ರಾತಿನಿಧಿಕ ಚಿತ್ರ
ಸಾಗರ: ರಾಜ್ಯ ಸರ್ಕಾರ ಕೈಗೊಳ್ಳಲು ಮುಂದಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿ– ಕಣಿವೆ ಉಳಿಸಿ ಹೋರಾಟ ಒಕ್ಕೂಟ ತೀರ್ಮಾನಿಸಿದೆ.
ಇಲ್ಲಿನ ನಗರಸಭೆಯ ಬಯಲು ರಂಗಮಂದಿರದಲ್ಲಿ ಸೋಮವಾರ ನಡೆದ ಒಕ್ಕೂಟದ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಯೋಜನೆ ವಿರುದ್ಧ ಜನ ಜಾಗೃತಿ ಮೂಡಿಸಲು ಸಾಗರದಲ್ಲಿ ಪ್ರತಿಭಟನಾ ಮೆರವಣಿಗೆ ಆಯೋಜಿಸಲು ನಿರ್ಣಯಿಸಲಾಗಿದೆ.
ಪ್ರತಿಭಟನಾ ಸಭೆಗೆ ಜಿಲ್ಲೆಯ ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಿ ಪಕ್ಷಾತೀತ, ಜಾತ್ಯತೀತವಾಗಿ ಆಂದೋಲನ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈಗಾಗಲೇ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗದಲ್ಲಿ ಒಕ್ಕೂಟದ ವತಿಯಿಂದ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆದಿದ್ದರೂ ಜನಪ್ರತಿನಿಧಿಗಳು ಹೋರಾಟ ನಡೆಸಿದವರ ಅಹವಾಲು ಕೇಳಲು ಕೂಡ ಮುಂದಾಗದೆ ಇರುವ ನಡೆ ಕುರಿತು ಸಭೆಯಲ್ಲಿ ಖಂಡನೆ ವ್ಯಕ್ತವಾಯಿತು.
ಯೋಜನಾ ಪ್ರದೇಶದ ಸ್ಥಳೀಯ ಸಂಸ್ಥೆಗಳ, ಸ್ಥಳೀಯ ಜನರ ಅಭಿಪ್ರಾಯವನ್ನು ಪಡೆಯದೆ, ಸತ್ಯಾಂಶವನ್ನು ಮುಚ್ಚಿಟ್ಟು ಶರಾವತಿ ನದಿ ಅಸ್ತಿತ್ವಕ್ಕೆ ಸಂಚಕಾರ ತರುವ, ಪಶ್ಚಿಮಘಟ್ಟಕ್ಕೆ ಕುತ್ತು ಉಂಟು ಮಾಡುವ ಯೋಜನೆ ಜಾರಿಗೆ ಸರ್ಕಾರ ಮುಂದಾಗಿರುವುದಕ್ಕೆ ಸಭೆಯಲ್ಲಿ ವಿರೋಧ ಸೂಚಿಸಲಾಯಿತು.
ಒಕ್ಕೂಟದ ಪ್ರಮುಖರಾದ ಅಖಿಲೇಶ್ ಚಿಪ್ಪಳಿ, ಶಿವಾನಂದ ಕುಗ್ವೆ, ವೆಂಕಟೇಶ್ ಕವಲಕೋಡು, ಧನುಷ್ ಕುಮಾರ್, ನಾರಾಯಣ ಮೂರ್ತಿ, ಮ.ಸ.ನಂಜುಂಡಸ್ವಾಮಿ, ಶ್ರೀಧರ ಭಾಗವತ್, ಭಾಗೀರಥಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.