ADVERTISEMENT

ಮೊದಲು ಶರಾವತಿ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿ

ಬಿವೈಆರ್‌ಗೆ ಕಾಂಗ್ರೆಸ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 5:23 IST
Last Updated 2 ಡಿಸೆಂಬರ್ 2022, 5:23 IST

ಶಿವಮೊಗ್ಗ: ‘ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಹೇಳಿಕೆ ನೀಡಲು ಸಂಸದ ಬಿ‌.ವೈ. ರಾಘವೇಂದ್ರ ಅವರಿಗೆ ಯಾವ ನೈತಿಕತೆ ಇದೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್ ಪ್ರಶ್ನಿಸಿದರು.

ರೈತರಿಗೆ ಭೂಮಿ ಹಕ್ಕು ನೀಡಲು ಶ್ರಮಿಸಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಭೂಮಿ ಹಕ್ಕು ಕಾಯ್ದೆ ಜಾರಿಗೊಳಿಸಿದ್ದು ಕಾಗೋಡು ತಿಮ್ಮಪ್ಪ ಎಂಬುದನ್ನು ಸಂಸದರು ಮರೆತಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಕಾರಿಪುರ ತಾಲ್ಲೂಕಿನ ಕಟ್ಟಿಗೆಹಳ್ಳ ಗ್ರಾಮದಲ್ಲಿ 2017ರಲ್ಲಿ ಭೂಮಿ ಹಕ್ಕುಪತ್ರ ನೀಡುವ ಕಾರ್ಯಕ್ರಮದಲ್ಲಿ ರಾಘವೇಂದ್ರ ಅವರು ತಮ್ಮ ಭಾಷಣದಲ್ಲಿ ಕಾಗೋಡು ತಿಮ್ಮಪ್ಪ ಅವರನ್ನು ಹಾಡಿ ಹೊಗಳಿದ್ದರು. ಆದರೆ, ಈಗ ಮುಳುಗಡೆ ಸಂತ್ರಸ್ತರ ಪರವಾಗಿ ಕಾಗೋಡು ಯಾವುದೇ ಯೋಜನೆ ಕಾರ್ಯರೂಪಕ್ಕೆತಂದಿಲ್ಲ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ ಎಂದರು.

ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ಪೂರ್ವಭಾವಿ ಸಭೆಯನ್ನು ನ.10ರಂದು ನಡೆಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿಯವರು, ಚುನಾವಣೆ ಹತ್ತಿರವಿದೆ ಎಂದು ತಿಳಿದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಅವರನ್ನು ಕರೆಸಿ ಸಭೆ ನಡೆಸಿದರು. ಆದರೆ, ಮುಖ್ಯಮಂತ್ರಿ ಸಭೆಯಲ್ಲಿ ಜನರು ಇರಲಿಲ್ಲ. ಇದು ಜನರು ಬಿಜೆಪಿಯನ್ನು ಮೂಲೆಗುಂಪಾಗಿಸಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಪಕ್ಷದ ಜನಾಕ್ರೋಶ ಪಾದಯಾತ್ರೆಗೆ ಜನ ಸಮೂಹ ನೆರೆದಿದ್ದನ್ನು ಕಂಡು ಬಿಜೆಪಿಗೆ ಭಯ ಶುರುವಾಗಿದೆ. ಹೀಗಾಗಿ ಸಂಸದರು ಸುದ್ದಿಗೋಷ್ಠಿ ನಡೆಸಿ ಪಕ್ಷದ ಮುಖಂಡರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ ಎಂದು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ವಿಮಾನ ನಿಲ್ದಾಣದ ಮೇಲಿರುವ ಕಾಳಜಿ, ಮುಳುಗಡೆ ಸಂತ್ರಸ್ತರ ಮೇಲಿಲ್ಲ. ಅವರು ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಮಲೆನಾಡು ರೈತ ಸಮಸ್ಯೆಗಳ ಅಧ್ಯಯನ ಸಮಿತಿ ಸಂಯೋಜಕ ರಮೇಶ್ ಹೆಗ್ಡೆ ಟೀಕಿಸಿದರು.

ವಕೀಲ ಎನ್.ಪಿ. ಧರ್ಮರಾಜ್, ಕಾಂಗ್ರೆಸ್ ಮುಖಂಡರಾದ ಜಿ.ಡಿ. ಮಂಜುನಾಥ್, ಶಿವನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.