ಶಿಕಾರಿಪುರ: ಪಟ್ಟಣದ ಸಾಲೂರು ರಸ್ತೆಯಲ್ಲಿ 1949ರಲ್ಲಿ ಆರಂಭಗೊಂಡ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಇದೀಗ ವಜ್ರ ಮಹೋತ್ಸವ ಸಂಭ್ರಮದಲ್ಲಿದೆ. ಹಲವು ಏಳುಬೀಳುಗಳನ್ನು ಕಂಡ ಸಂಘ ಪ್ರಸಕ್ತ ಸಾಲಿನಲ್ಲಿ ₹ 27.56 ಲಕ್ಷ ಲಾಭದೊಂದಿಗೆ ಮುನ್ನಡೆಯುತ್ತಿದೆ.
ಭದ್ರ ಬುನಾದಿ: ವಿಧಾನ ಪರಿಷತ್ ಸಭಾಪತಿಯಾಗಿದ್ದ ಕೆ.ವಿ. ನರಸಪ್ಪ ಅವರು ಪುರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಟಿಎಪಿಸಿಎಂಎಸ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾಗಿ ಸಂಸ್ಥೆಗೆ 4 ಎಕರೆ ಭೂಮಿ ಪಡೆದು ಕಟ್ಟಡ, ಗೋದಾಮು ನಿರ್ಮಿಸಿ ಸಣ್ಣಮಟ್ಟದ ವಹಿವಾಟಿಗೆ ಚಾಲನೆ ನೀಡಿದ್ದರು. ನಂತರ ಭತ್ತ ಹಲ್ಲಿಂಗ್ ಯಂತ್ರ ಸ್ಥಾಪಿಸಿ ರೈತರಿಗೆ ಕಡಿಮೆ ದರಕ್ಕೆ ಹಲ್ಲಿಂಗ್ ಮಾಡಲು ಆರಂಭಿಸಲಾಯಿತು. ಅದು ಉದ್ಯೋಗ ಅವಕಾಶ ಕಲ್ಪಿಸುವ ಜತೆಗೆ ಕೃಷಿಕರಿಗೆ ಅನುಕೂಲವನ್ನೂ ಕಲ್ಪಿಸಿತ್ತು.
ರಾಜ್ಯ ಮಟ್ಟದ ಪ್ರಶಸ್ತಿ:1977– 78ರಲ್ಲಿ ರಾಜ್ಯದಲ್ಲಿ ಲೇವಿ ಸಂಗ್ರಹ ಕಾಯ್ದೆ ಆರಂಭಗೊಂಡಿತ್ತು. ಆಗ 2 ಲಕ್ಷ ಕ್ವಿಂಟಲ್ ಭತ್ತ ಸಂಗ್ರಹಿಸಿ ರಾಜ್ಯದಲ್ಲೇ ಅತಿಹೆಚ್ಚು ಲೇವಿ ಸಂಗ್ರಹಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಪ್ರಶಸ್ತಿ ಪಡೆಯಿತು. ರಾಜ್ಯದಲ್ಲೇ ಅತ್ಯುತ್ತಮ ಹಣಕಾಸು ವಹಿವಾಟು ಹೊಂದಿರುವ ಟಿಎಪಿಸಿಎಂಎಸ್ ಎನ್ನುವ ಹೆಮ್ಮೆಯೂ ಸಂಘಕ್ಕೆ ಹಲವು ವರ್ಷಗಳ ಕಾಲ ಇತ್ತು.
ನಷ್ಟದ ಹಾದಿ: ಸರ್ಕಾರ ಲೇವಿ ಸಂಗ್ರಹ ನಿಲ್ಲಿಸಿದಾಗ ಸಂಘದಲ್ಲಿ ಭತ್ತ ಹಲ್ಲಿಂಗ್ ಕಡಿಮೆಯಾಯಿತು. ರೈತಿಂದ ಹಲ್ಲಿಂಗ್ಗಾಗಿ ಪಡೆಯುತ್ತಿದ್ದ ಮೊತ್ತವು ಸಂಘದ ಖರ್ಚು– ವೆಚ್ಚಕ್ಕೆ ಸರಿಯಾಗುತ್ತಿತ್ತು. ಯಂತ್ರ ಹಳತಾದಂತೆ ಅದರ ನಿರ್ವಹಣೆ ದುಬಾರಿ ಆಗಿ ಸಂಘ ನಷ್ಟದ ಹಾದಿಯಲ್ಲಿ ಸಾಗುವಂತಾಯಿತು. ವಾಣಿಜ್ಯ ಮಳಿಗೆ, ಗೋದಾಮು ಬಾಡಿಗೆಯಲ್ಲೇ ಸಿಬ್ಬಂದಿ ಅರ್ಧ ಸಂಬಂಳ ಪಡೆಯುವಷ್ಟು ಸಂಘದ ಆರ್ಥಿಕ ಸ್ಥಿತಿ ಕುಸಿಯಿತು.
ಗೊಬ್ಬರ ವಹಿವಾಟು: 2000– 01ನೇ ಸಾಲಿನಲ್ಲಿ ಸಂಘವು ರಸಗೊಬ್ಬರ, ಔಷಧ ಮಾರಾಟ ಆರಂಭಿಸಿತು. ಅದೂ ಸಂಘದ ನಷ್ಟ ತುಂಬುವಷ್ಟು ವಹಿವಾಟು ಆಗುತ್ತಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಟಿಎಪಿಸಿಎಂಎಸ್ ಮೂಲಕ ತಾಲ್ಲೂಕಿನ ಎಲ್ಲ ಸಹಕಾರ ಸಂಘಗಳಿಗೆ ರಸಗೊಬ್ಬರ, ಔಷಧ ಪೂರೈಕೆ ಮಾಡುವ ಯೋಜನೆ ರೂಪಿಸಲಾಯಿತು. ಅದು ಸಂಘದ ಆರ್ಥಿಕ ಚೈತನ್ಯಕ್ಕೆ ಸಹಕಾರಿ ಆಯಿತು.
ಪೆಟ್ರೋಲ್ ಬಂಕ್: 2019– 20ನೇ ಸಾಲಿನಲ್ಲಿ ಸಂಸ್ಥೆ ವತಿಯಿಂದ ಖಾಲಿ ಜಾಗದಲ್ಲಿ ಭಾರತ್ ಪೆಟ್ರೋಲಿಯಂ ಸಂಸ್ಥೆಯ ಸಹಯೋಗದಲ್ಲಿ ಪೆಟ್ರೋಲ್ ಬಂಕ್ ಆರಂಭಿಸಲಾಯಿತು. ಅದು ಸಂಸ್ಥೆಯ ಷೇರುದಾರ ರೈತರಿಗೆ, ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ಆಸ್ತಿಯೇ ಸಂಘಕ್ಕೆ ಆಧಾರ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು 17 ವಾಣಿಜ್ಯ ಸಂಕೀರ್ಣ, ಶಿರಾಳಕೊಪ್ಪ ಎಪಿಎಂಸಿಯಲ್ಲಿ 2 ಗೋದಾಮು, ಶಿಕಾರಿಪುರ ಎಪಿಎಂಸಿಯಲ್ಲಿ 1 ಗೋದಾಮು, ಸಂಸ್ಥೆ ಆವರಣದಲ್ಲಿ 2 ಗೋದಾಮು ಇದ್ದು, ಅವುಗಳ ಬಾಡಿಗೆ ಹಣ ಸಂಘದ ಆರ್ಥಿಕ ಚಟುವಟಿಕೆಗೆ ಆಧಾರವಾಗಿದೆ. 75 ವರ್ಷಗಳಲ್ಲಿ ಹಲವು ಏಳುಬೀಳು ಕಂಡಿರುವ ಟಿಎಪಿಸಿಎಂಎಸ್‌ನಲ್ಲಿ ಇದೀಗ 2,143 ರೈತ ಸದಸ್ಯರಿದ್ದು, 32 ಸಹಕಾರ ಸಂಘಗಳ ಒಟ್ಟು ₹ 2.46 ಕೋಟಿ ಷೇರು ಬಂಡವಾಳ ಇದೆ. 2025– 26ನೇ ಸಾಲಿನಲ್ಲಿ ₹ 13.36 ಕೋಟಿ ವಹಿವಾಟು ನಡೆಸಿ ₹ 27.56 ಲಕ್ಷ ಒಟ್ಟು ನಿವ್ವಳ ಲಾಭ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.