ADVERTISEMENT

ಭದ್ರಾವತಿ ಯುವಕನ ಸಾವು: ಕೊಡಚಾದ್ರಿ, ವನ್ಯಜೀವಿ ತಾಣಗಳ ಪ್ರವೇಶ ನಿರ್ಬಂಧ

ರವಿ ನಾಗರಕೊಡಿಗೆ
Published 1 ಆಗಸ್ಟ್ 2023, 7:46 IST
Last Updated 1 ಆಗಸ್ಟ್ 2023, 7:46 IST
ಕೊಡಚಾದ್ರಿ ಗಿರಿಶಿಖರದ ನೋಟ
ಕೊಡಚಾದ್ರಿ ಗಿರಿಶಿಖರದ ನೋಟ   

ಹೊಸನಗರ: ಭದ್ರಾವತಿಯ ಯುವಕನೊಬ್ಬ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದ ಬಳಿ ಕಾಲು ಜಾರಿ ಬಿದ್ದು ಮೃತಪಟ್ಟ ದುರಂತ ಪ್ರವಾಸಿ ತಾಣಗಳ ಮೇಲೆ ಪರಿಣಾಮ ಬೀರಿದೆ.

ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿ ಸೇರಿದಂತೆ ರಾಜ್ಯದ ವನ್ಯಜೀವಿ ವ್ಯಾಪ್ತಿಯ ಎಲ್ಲ ಪ್ರವಾಸಿ, ಧಾರ್ಮಿಕ ತಾಣಗಳ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಭಾನುವಾರದಿಂದಲೇ ಕೊಡಚಾದ್ರಿ ಗಿರಿಯ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಸದ್ಯ ಮಳೆಯಾಗುತ್ತಿದ್ದು, ಜಲಪಾತಗಳ ವೀಕ್ಷಣೆ ಹೆಚ್ಚಿನ ಜನರು ತೆರಳುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧಿಸಲಾಗಿದೆ.

ADVERTISEMENT

ಕೊಲ್ಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿ ತಪ್ಪಲಿನ ಹಿಡ್ಲುಮನೆ, ಅರಶಿನಗುಂಡಿ, ಕೂಡ್ಲು ಬರ್ಕಳ, ವನಕಬ್ಬಿ, ಬಂಡಾಜೆ ಸೇರಿದಂತೆ ಇತರ ಜಲಪಾತಗಳು, ‌ಕೊಡಚಾದ್ರಿ ಗಿರಿ ಸೇರಿದಂತೆ ಕುದುರೆಮುಖ ಪೀಕ್, ನೇತ್ರಾವತಿ ಪೀಕ್, ನರಸಿಂಹಗಡ- ಗಡಾಯಿಕಲ್ಲು, ವಾಲಿಕುಂಜ, ನರಸಿಂಹ ಪರ್ವತ, ಗಂಗಡಿಕಲ್ಲು, ಕುರಿಂಗಲ್ ಸೇರಿದಂತೆ ಪ್ರಮುಖ ಸ್ಥಳಗಳ ಪ್ರವೇಶ ನಿಷೇಧಿಸಲಾಗಿದೆ.

ಜೀಪ್ ಸಂಚಾರ ಸ್ಥಗಿತ:

ಕಟ್ಟಿನಹೊಳೆ, ಸಂಪೇಕಟ್ಟೆ, ಕೊಲ್ಲೂರುಗಳಿಂದ ಕೊಡಚಾದ್ರಿಗೆ ಪ್ರವಾಸಿಗರು, ಭಕ್ತರನ್ನು ಕೊಂಡೊಯ್ಯುವ ಜೀಪ್ ಸಂಚಾರಕ್ಕೂ ಕಡಿವಾಣ ಹಾಕಲಾಗಿದೆ. ಕೊಲ್ಲೂರು, ನಿಟ್ಟೂರು, ಸಂಪೇಕಟ್ಟೆ, ಕಟ್ಟಿನಹೊಳೆಯಿಂದ ದಿನಕ್ಕೆ  210ಕ್ಕೂ ಹೆಚ್ಚು ಜೀಪ್‌ಗಳು ಸಂಚರಿಸುತ್ತಿದ್ದವು.

ಇಲಾಖೆಯಿಂದ ನಿರ್ಬಂಧದ ಆದೇಶ ಹೊರ ಬೀಳುತ್ತಿದ್ದಂತೆಯೇ ಜೀಪ್ ಮಾಲೀಕರು, ಚಾಲಕರು ಆತಂಕಕ್ಕೀಡಾಗಿದ್ದಾರೆ. ಕೊಡಚಾದ್ರಿ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಅರಶಿನಗುಂಡಿ ದುರಂತ ಆಧರಿಸಿ ಜಲಪಾತಗಳಿಗೆ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಸರಿ. ಆದರೆ ಕೊಡಚಾದ್ರಿಗೆ ಕೇವಲ ಪ್ರವಾಸಿಗರು ಬರುವುದಿಲ್ಲ. ರಾಜ್ಯ ಹಾಗೂ ಕೇರಳ ಸೇರಿದಂತೆ ಹೊರರಾಜ್ಯದಿಂದಲೂ ಭಕ್ತರು ಬರುತ್ತಾರೆ. ಈ ನಿಷೇಧ ಧಾರ್ಮಿಕ ಸ್ಥಳಗಳಿಗೆ ಬರುವವರಿಗೆ ಅಡ್ಡಿ ಉಂಡುಮಾಡುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

ಕೊಡಚಾದ್ರಿ ಗಿರಿ ಹತ್ತುವ ಜೀಪ್‌ಗಳನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಏಕಾಏಕಿ ನಿಷೇಧಿಸಿದರೆ ಕಷ್ಟ ಎಂದು ಜೀಪ್‌ ಮಾಲೀಕರು ಹೇಳಿದ್ದಾರೆ.

ವಾರಾಂತ್ಯದಲ್ಲೂ ಮಳೆ ಹೆಚ್ಚಿದ್ದ ಕಾರಣ ಪ್ರವಾಸಿಗರು ಆಗಮಿಸಿದ್ದರು. ಏಕಾಏಕಿ ನಿಷೇಧ ಹೇರಿದ್ದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ವಿಷಯ ತಿಳಿಯದೆ ಸೋಮವಾರ ಬಂದ ಪ್ರವಾಸಿಗರು ನಿರಾಸೆಯಿಂದ ವಾಪಸಾದರು.

ಜಲಾಪಾತದ ಸುಳಿ ನೀರಿನ ಹರಿವಿಗೆ ಪ್ರವಾಸಿಗರು ಸಿಲುಕಿ ಪ್ರಾಣ ಹಾನಿ ಆಗುತ್ತದೆ ಎಂಬುದು ಸತ್ಯ. ಅಂತಹ ಜಲಪಾತ, ಜರಿ, ಅಣೆಕಟ್ಟು ಪ್ರದೇಶಗಳಿಗೆ ನಿಷೇಧ ಹೇರುವುದು ಸೂಕ್ತ. ಅದನ್ನು ಬಿಟ್ಟು ಗಿರಿ, ಪರ್ವತ, ಗುಡ್ಡಗಾಡು ಪ್ರದೇಶಗಳಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ. ನಗರ ಹೋಬಳಿ ಮುಳುಗಡೆ ಪ್ರದೇಶವಾಗಿದ್ದು ಇಲ್ಲಿ ಪ್ರವಾಸೋದ್ಯಮವೇ ಆಧಾರ. ಸರ್ಕಾರ ಆದೇಶ ಮರು ಪರಿಶೀಲಿಸಬೇಕು ಎಂದು ಸ್ಥಳೀಯರಾದ ನಗರ ನಿತಿನ್ ಒತ್ತಾಯಿಸಿದರು.

ಕೊಡಚಾದ್ರಿ ಗಿರಿಶಿಖರದ ನೋಟ
ಕೊಡಚಾದ್ರಿ ಗಿರಿಶಿಖರದ ನೋಟ
ಏಕಾಏಕಿ ನಿರ್ಭಂಧ ಹೇರಿದ್ದು ಸರಿಯಲ್ಲ. ಕೊಡಚಾದ್ರಿಯನ್ನು ನಂಬಿಕೊಂಡು ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ನಿರ್ಬಂಧವನ್ನು ಸಡಿಲಗೊಳಿಸಿದರೆ ಅನುಕೂಲವಾಗಲಿದೆ
ಗೋಪಾಲ್ ಕಟ್ಟಿನಹೊಳೆ ಜೀಪ್ ಚಾಲಕ ಮತ್ತು ಮಾಲೀಕರ ಸಂಘ
ಕೊಲ್ಲೂರು ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಮುಂಗಾರು ಜೋರಾಗಿದೆ. ಇಲ್ಲಿನ ಗಿರಿ ಚಾರಣ ಪ್ರದೇಶಗಳು. ಜಲಪಾತ ಸ್ಥಳಗಳು ಅಪಾಯಕಾರಿಯಾಗಿವೆ. ಕೊಡಚಾದ್ರಿಗೆ ಹೋಗಲು ಕಚ್ಚಾ ರಸ್ತೆ ಇದೆ. ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ದೀಪಕ್ ನಾಯಕ್ ವಲಯ ಅರಣ್ಯಾಧಿಕಾರಿ ಕೊಲ್ಲೂರು ವನ್ಯಜೀವಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.