ADVERTISEMENT

ಗಡಿನೇರಲು: ಸುಗಮ ಸಂಚಾರಕ್ಕೆ ಗ್ರಾಮಸ್ಥರ ಪರದಾಟ

ಎಂಪಿಎಂ ನೆಡುತೋಪು ತಂದ ಅವಾಂತರ: ಕೆಸರುಮಯವಾದ ಸಂಪರ್ಕ ರಸ್ತೆ

ರವಿ ನಾಗರಕೊಡಿಗೆ
Published 11 ಆಗಸ್ಟ್ 2023, 7:12 IST
Last Updated 11 ಆಗಸ್ಟ್ 2023, 7:12 IST
ಹೊಸನಗರ ತಾಲ್ಲೂಕು ಕೆ.ಬಿ.ವೃತ್ತದ ಹೊಸನಾಡು ಗ್ರಾಮದ ಗಡಿನೇರಳು ರಸ್ತೆ ಹದಗೆಟ್ಟಿದ್ದು, ಓಡಾಟಕ್ಕೆ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ
ಹೊಸನಗರ ತಾಲ್ಲೂಕು ಕೆ.ಬಿ.ವೃತ್ತದ ಹೊಸನಾಡು ಗ್ರಾಮದ ಗಡಿನೇರಳು ರಸ್ತೆ ಹದಗೆಟ್ಟಿದ್ದು, ಓಡಾಟಕ್ಕೆ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ   

ಹೊಸನಗರ: ಒಂದೆಡೆ ಎಂಪಿಎಂ (ಮೈಸೂರು ಪೇಪರ್‌ ಮಿಲ್) ನೆಡುತೋಪು ನಿರ್ಮಾಣ, ಮತ್ತೊಂದೆಡೆ ಮರಗಳ ಕಡಿತಲೆ, ಕಾಮಗಾರಿಗಾಗಿ ಎಡಬಿಡದೇ ವಾಹನಗಳ ಸಂಚಾರ... ಇದರ ಪರಿಣಾಮ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗಡಿನೇರಲು ಗ್ರಾಮಸ್ಥರು ಸುಗಮ ಓಡಾಡಕ್ಕೆ ಪರದಾಡಬೇಕಾದ ಸ್ಥಿತಿ ಒದಗಿದೆ.

ನಿಟ್ಟೂರು (ನಾಗೋಡಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸನಾಡು ಗ್ರಾಮದ ಗಡಿನೇರಲು ಗ್ರಾಮಕ್ಕೆ ಹೋಗುವ ರಸ್ತೆಯ ಅವ್ಯವಸ್ಥೆ ಇದು.

ಕೆಸರು ಗದ್ದೆಯಾದ ರಸ್ತೆಯಲ್ಲಿ ಗ್ರಾಮಸ್ಥರ ಬೈಕ್ ಓಡಾಡುವುದಿರಲಿ, ನಡೆದು ಹೋಗಲೂ ಸಾಧ್ಯವಾಗುತ್ತಿಲ್ಲ. ನಿತ್ಯ ಇದೇ ಮಾರ್ಗದಲ್ಲಿ ಶಾಲೆ, ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ADVERTISEMENT

ಕಾಮಗಾರಿ ತಂದ ಕುತ್ತು:

ಗಡಿನೇರಲು ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಕ್ಕೆ ಅದೊಂದೇ ಸಂರ್ಪಕ ರಸ್ತೆ. ಗ್ರಾಮದ ಸರ್ವೆ ನಂ. 205ರಲ್ಲಿ 509 ಎಕರೆ ಗೋಮಾಳ ಭೂಮಿ ಇದ್ದು, ಅದರಲ್ಲಿ ಗ್ರಾಮಕ್ಕೆ ಹೊಂದಿಕೊಂಡಿರುವ 78 ಎಕರೆ ಜಾಗದಲ್ಲಿ ಅಕೇಶಿಯಾ ನೆಡುತೋಪು ನಿರ್ಮಾಣ ಮಾಡಲಾಗಿದೆ. 2020ರಲ್ಲಿ 40 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಜಾನುವಾರುಗಳಿಗೆ ಮೇಯಲು ಜಾಗವಿಲ್ಲದಂತಾಗಿದೆ.

ಮತ್ತೊಂದೆಡೆ ಮರಗಳ ಕಡಿತಲೆ, ಸಸಿಗಳ ನಾಟಿ ಕಾರ್ಯಕ್ಕಾಗಿ ನಿರಂತರವಾಗಿ ಅಕೇಶಿಯಾ ಸಾಗಿಸಲು ವಾಹನಗಳ ಓಡಾಟ ಇರುತ್ತದೆ. ಇದರಿಂದ ರಸ್ತೆ ಮೇಲೆ ಮಳೆ ನೀರು ನಿಂತು ಅಕ್ಷರಶಃ ಕೆಸರುಗದ್ದೆಯಂತಾಗಿದೆ. ಇನ್ನು ರಸ್ತೆ ಬದಿಯ ಅಕೇಶಿಯಾ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿದ್ದು, ಆಗಾಗ ವಿದ್ಯುತ್ ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ನಿಯಮ ಮೀರಿದ ಎಂಪಿಎಂ:

ಯಾವುದೇ ಗ್ರಾಮದಲ್ಲಿ ಅಕೇಶಿಯಾ ಮರಗಳ ಕಡಿತಲೆ ಮಾಡಿದಲ್ಲಿ ಒಟ್ಟು ಮೌಲ್ಯದ ಶೇ 5ರಷ್ಟನ್ನು ಆಯಾ ಗ್ರಾಮದ ಅಭಿವೃದ್ಧಿಗೆ ನೀಡಬೇಕು. ಆ ಮೂಲಕ ಗ್ರಾಮದ ಮೂಲ ಸೌಲಭ್ಯಕ್ಕೆ ಉತ್ತೇಜನ ನೀಡಬೇಕು ಎಂಬ ನಿಯಮವಿದೆ. ಆದರೆ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಎಂಪಿಎಂ ವಿಭಾಗ ಅದನ್ನು ಗಾಳಿಗೆ ತೂರಿದೆ. ಅಕೇಶಿಯಾ ಮರಗಳನ್ನು ಟಿಂಬರ್‌ಗೆ ಸಾಗಿಸುವ ಇಲಾಖೆ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದೆ. ಆದರೆ, ಹದಗೆಟ್ಟ ರಸ್ತೆ, ವಿದ್ಯುತ್ ವ್ಯತ್ಯಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

‘ಗಡಿನೇರಲು ರಸ್ತೆಯನ್ನು ಬೇಸಿಗೆಯಲ್ಲಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಆದರೆ, ಅಕೇಶಿಯಾ ಕಡಿತಲೆ, ಬೃಹತ್ ವಾಹನಗಳ ನಿರಂತರ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಬಗ್ಗೆ ಯಾರನ್ನು ಕೇಳಿದರು ಉತ್ತರ ಇಲ್ಲ. ಪರಿಹಾರವೂ ಇಲ್ಲ ಎಂಬಂತಾಗಿದೆ’ ಎಂದು ಗ್ರಾಮದ ಹಿರಿಯರಾದ ಕೃಷ್ಣ ಆಚಾರ್ ಆರೋಪಿಸಿದರು.

ಎಂಪಿಎಂನಿಂದ ವಂಚನೆ
ಗಡಿನೇರಲು ರಸ್ತೆಯನ್ನು ಬೇಸಿಗೆಯಲ್ಲಿ ಗ್ರಾಮ ಪಂಚಾಯಿತಿ ಅನುದಾನ ಬಳಸಿ ಅಭಿವೃದ್ಧಿ ಮಾಡಲಾಗಿದೆ. ಎಂಪಿಎಂ ಮರಗಳ ಕಡಿತಲೆಯಿಂದ ಬಂದ ಆದಾಯದಲ್ಲಿ ಶೇ 5ರಷ್ಟು ಪಂಚಾಯಿತಿಗೆ ನೀಡಬೇಕು. ಆದರೆ ಅರಣ್ಯ ಇಲಾಖೆಯ ಎಂಪಿಎಂ ವಿಭಾಗ ನಿಯಮವನ್ನು ಗಾಳಿಗೆ ತೂರಿ ಪಂಚಾಯಿತಿಯನ್ನು ವಂಚಿಸಿದೆ. ಈಗ ರಸ್ತೆ ಹದಗೆಟ್ಟಿದ್ದು ಗ್ರಾಮಸ್ಥರು ಪಂಚಾಯಿತಿಯನ್ನು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. –  ರಾಘವೇಂದ್ರ ಆಚಾರ್ ಗ್ರಾಮ ಪಂಚಾಯಿತಿ ಸದಸ್ಯ ‍ಪ್ರಸ್ತಾವ ಬಂದರೆ ನೆರವು ಗಡಿನೇರಲು ಗ್ರಾಮದಲ್ಲಿ ನೆಡು ತೋಪು ಕಡಿತಲೆ ಸಂಬಂಧ ಅಲ್ಲಿನ ರಸ್ತೆ ಹಾಳಾಗಿರುವ ಬಗ್ಗೆ ದೂರು ಇದೆ. ಮರು ನೆಡುತೋಪು ನಿರ್ಮಾಣದ ನಂತರ ರಸ್ತೆ ದುರಸ್ತಿ ಮಾಡಲಾಗುವುದು.ನೆಡುತೋಪು ಕಡಿತಲೆ ನಂತರದಲ್ಲಿ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವ ಬಂದಲ್ಲಿ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. –ಪಾಸ್ಕಲ್ ರೋಡ್ರಿಗಾಸ್ ಸಹಾಯಕ ಅರಣ್ಯ ಅಧಿಕಾರಿ ಸಾಗರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.