ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಕೇವಲ 27 ವಾರಗಳ ಗರ್ಭಾವಸ್ಥೆಯಲ್ಲಿದ್ದು, ಅವಧಿಗೆ ಮುಂಚಿತವಾಗಿ ಜನಿಸಿದ ಅವಳಿ ಶಿಶುಗಳ ಜೀವ ಉಳಿಸಿದ್ದಾರೆ.
ಒಂದು ಮಗು 800 ಗ್ರಾಂ ಮತ್ತೊಂದು 850 ಗ್ರಾಂ ತೂಕವಿದ್ದು, 10 ವರ್ಷಗಳಿಗೂ ಹೆಚ್ಚು ಕಾಲ ಮಕ್ಕಳಿಲ್ಲದೇ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಈ ಅವಳಿ ಮಕ್ಕಳು ಜನಿಸಿವೆ. ಮೂರು ವರ್ಷಗಳ ಚಿಕಿತ್ಸೆಯ ನಂತರ, ಅವರು ಗರ್ಭ ಧರಿಸಿದ್ದರು. ಆದರೆ, ಹೆರಿಗೆಗೆ ಮೊದಲೇ ಭ್ರೂಣ ಆವರಿಸಿರುವ ಪೊರೆಗಳು ಒಡೆದು, ಆಮ್ನಿಯೋಟಿಕ್ ದ್ರಾವಣ ಸೋರಿಕೆ ಆದ ಕಾರಣ, ಅವರಿಗೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಹೆರಿಗೆ ಮಾಡಿಸಬೇಕಾಯಿತು.
ಸ್ತ್ರೀರೋಗ ತಜ್ಞ ಡಾ.ರಾಘವೇಂದ್ರ ಭಟ್ ಈ ಅಪಾಯಕಾರಿ ಗರ್ಭಧಾರಣೆಯನ್ನು (High risk pregnancy) ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿದರು. ಭ್ರೂಣದ ಶ್ವಾಸಕೋಶದ ಬೆಳವಣಿಗೆಗೆ ಸಹಾಯ ಮಾಡಲು ತಾಯಿಗೆ ಸಮಯಕ್ಕೆ ಸರಿಯಾಗಿ ಸ್ಟೀರಾಯ್ಡ್ ಚುಚ್ಚುಮದ್ದು ಮತ್ತು ಸೋಂಕುಗಳನ್ನು ತಡೆಯಲು IV ಆಂಟಿಬಯಾಟಿಕ್‌ಗಳನ್ನು ನೀಡಲಾಯಿತು. ಈ ನಿರ್ಣಾಯಕ ಹಂತಗಳು ಶಿಶುಗಳು ಬದುಕುಳಿಯುವಿಕೆಗೆ ಹೆಚ್ಚಿನ ಸಹಾಯ ಮಾಡಿದವು.
ಹೆರಿಗೆಯ ನಂತರ, ಎರಡೂ ನವಜಾತ ಶಿಶುಗಳು ಉಸಿರಾಟದ ತೊಂದರೆ, ಕಾಮಾಲೆ, ತೀವ್ರ ರಕ್ತದ ಸೋಂಕುಗಳು ಮತ್ತು ರಕ್ತಹೀನತೆ ಸೇರಿ ಜೀವಕ್ಕೆ ಅಪಾಯಕಾರಿಯಾದ ಸವಾಲುಗಳನ್ನು ಎದುರಿಸಿದವು. ಈ ಎಲ್ಲ ಅಡೆತಡೆಗಳ ನಡುವೆಯೂ, ಡಾ.ಅಪ್ರಮೇಯ ಎಚ್.ಎಸ್. ಮತ್ತು ಡಾ.ಭರತ್ ವಿ. ನಾಡಿಗ್ ನೇತೃತ್ವದ ಮಕ್ಕಳ ವೈದ್ಯಕೀಯ ತಂಡವು ಶಿಶುಗಳ ಜೀವ ಉಳಿಸುವಲ್ಲಿ ಯಶಸ್ವಿಯಾಯಿತು. ಶಿಶುಗಳನ್ನು ಆಸ್ಪತ್ರೆಯ ಸುಧಾರಿತ ಲೆವೆಲ್– 3 ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್ (NICU) ನಲ್ಲಿ ಇರಿಸಲಾಯಿತು. ಅಲ್ಲಿ ಅವರಿಗೆ ನಿರಂತರ ಮೇಲ್ವಿಚಾರಣೆ ಮತ್ತು ವಿಶೇಷ ಆರೈಕೆ ನೀಡಲಾಯಿತು.
ಇಂತಹ ನಿರ್ಣಾಯಕ ಪ್ರಕರಣಗಳ ನಿರ್ವಹಣೆಗೆ ಕೇವಲ ವೈದ್ಯಕೀಯ ಪರಿಣತಿ ಮಾತ್ರವಲ್ಲ ತಂಡದ ಕೆಲಸವೂ ಅಗತ್ಯ. ನಮ್ಮ ಸಂಘಟಿತ ಪ್ರಯತ್ನ ಅವಳಿ ಮಕ್ಕಳ ಜೀವ ಕಾಪಾಡುವಲ್ಲಿ ಯಶಸ್ವಿಯಾಯಿತು.- ಡಾ.ಅಪ್ರಮೇಯ, ತಜ್ಞ ವೈದ್ಯ
ಅವಧಿಗೆ ಮುಂಚಿತವಾಗಿ ಜನಿಸಿದ ಅವಳಿ ಮಕ್ಕಳನ್ನು ಬದುಕುಳಿಸಿರುವುದು ನಿಜಕ್ಕೂ ಅದ್ಭುತ. ಇದು ನಮ್ಮ ವೈದ್ಯಕೀಯ ತಂಡದ ಬದ್ಧತೆ. ಸಮರ್ಥ ತಂಡದ ಕೆಲಸ ಮತ್ತು ಸುಧಾರಿತ ಆರೈಕೆಯಿಂದ ಮಾತ್ರ ಸಾಧ್ಯವಾಗಿದೆ.–ವರ್ಗೀಸ್ ಪಿ. ಜಾನ್ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.