ಶಿವಮೊಗ್ಗ: ‘ಸಂಸದ ಬಿ.ವೈ.ರಾಘವೇಂದ್ರ ಅವರ ಜನ್ಮದಿನದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಮ್ಮ ಸ್ಥಾನದ ಘನತೆ ಮರೆತು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಸಿ.ಯೋಗೀಶ್, ಷಡಾಕ್ಷರಿ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿ ಎಂದು ಸಲಹೆ ನೀಡಿದರು.
‘ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಆ. 5ರಂದು ಸಂಸದ ಬಿ.ವೈ.ರಾಘವೇಂದ್ರ ಅವರ ಜನ್ಮದಿನ ಆಚರಣೆಯ ಸಿದ್ಧತೆಗೆ ನಡೆದ ಪೂರ್ವಭಾವಿ ಸಮಾರಂಭದಲ್ಲಿ ಸಿ.ಎಸ್.ಷಡಾಕ್ಷರಿ ಭಾಗಿಯಾಗಿದ್ದಾರೆ. ಅವರೇ ಆ ಸಭೆಯ ಪ್ರಾಯೋಜಕರಂತೆ ವರ್ತಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವರು ಸಭೆಯಲ್ಲಿ ಭಾಗವಹಿಸಿದ್ದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು. ಸಭೆಯ ಚಿತ್ರವನ್ನು ಇದೇ ವೇಳೆ ಅವರು ಬಿಡುಗಡೆ ಮಾಡಿದರು.
‘ಷಡಾಕ್ಷರಿ ನೌಕರರ ಸಂಘದ ಅಧ್ಯಕ್ಷರಾಗುವ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುವುದು ಸಲ್ಲ. ಇದು ನೌಕರರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಷಡಾಕ್ಷರಿ ಅವರಿಗೆ ಸದಸ್ಯತ್ವ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಿ’ ಎಂದರು.
‘ಮುಂಬರುವ ಚುನಾವಣೆಯಲ್ಲಿ ಷಡಾಕ್ಷರಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇದೆಯಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೀಶ್, ‘ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದವರೆಲ್ಲ ಮೂಲ ಕಾಂಗ್ರೆಸ್ಸಿಗರೇ ಆಗಿದ್ದರು. ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಮಣೆ ಹಾಕುತ್ತದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಿನ್ನಪ್ಪ, ಬಾಬು, ನವೀನ್‌ಕುಮಾರ್, ನಾಗರಾಜ್, ಶಿವಕುಮಾರ್, ವಿಶ್ವನಾಥ್, ಕಾಶಿ, ಯಮುನಾ ರಂಗೇಗೌಡ, ರಾಜು, ಮುನಾವರ್ ಹಾಜರಿದ್ದರು.
‘ಯೋಗೀಶ್ ಸಣ್ಣತನ ಬಿಡಿ ಪಕ್ಷ ಜಾತಿ ತರಬೇಡಿ’
ಶಿವಮೊಗ್ಗ: ‘ತುಮಕೂರಿನ ಸಿದ್ಧಗಂಗಾ ಮಠಕ್ಕೆ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಅಕ್ಕಿ ಸಮರ್ಪಣೆ ಉದ್ದೇಶದಿಂದ ದಿನಕ್ಕೆ ನಾಲ್ಕೈದು ಸಭೆಗಳನ್ನು ಮಾಡುತ್ತಿದ್ದೇನೆ. ಅದನ್ನು ತಿರುಚಿ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಅವರು ಸಣ್ಣತನ ಬಿಡಲಿ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಸಿದ್ಧಗಂಗಾ ಮಠದ ವಿಚಾರದಲ್ಲಿ ಪಕ್ಷ ಜಾತಿ ತಂದರೆ ಅದು ಎಲ್ಲಿಗೆ ಹೋಗಿ ನಿಲ್ಲಲು ಸಾಧ್ಯ? ಮೊದಲು ನಾನು ಸರ್ಕಾರಿ ನೌಕರ. ನಂತರ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ. ನನ್ನ ಇತಿಮಿತಿ ಚೌಕಟ್ಟು ಗೊತ್ತಿದೆ. ನಾನು ರಾಜಕಾರಣಕ್ಕೆ ಬರಲು ಯೋಚಿಸಿಲ್ಲ. ರಾಜಕಾರಣಕ್ಕೆ ಬರುವುದಾದರೆ ಹೇಗೆಂಬುದು ನನಗೆ ಗೊತ್ತಿದೆ’ ಎಂದು ಹೇಳಿದರು.
‘ಯೋಗೀಶ್ ಬಿಡುಗಡೆ ಮಾಡಿದ ಚಿತ್ರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಜನ್ಮದಿನದ ಸಿದ್ಧತಾ ಸಭೆ ಎಂಬ ಬ್ಯಾನರ್ ಇದೆಯೇ? ಸಂಸದರ ಬೆಂಬಲಿಗರು ಸಿದ್ಧಗಂಗಾ ಮಠಕ್ಕೆ ಅಕ್ಕಿ ಕೊಡಬಾರದು ಎಂದೇನೂ ಇಲ್ಲವಲ್ಲ. ಪುಣ್ಯದ ಕೆಲಸಕ್ಕೆ ಪಕ್ಷದ ಲೇಬಲ್ ಹಚ್ಚಬೇಡಿ’ ಎಂದು ಹೇಳಿದ ಷಡಾಕ್ಷರಿ ‘ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ’ ಎಂದರು.
‘ಅಕ್ಕಿ ಸಮರ್ಪಣಾ ಕಾರ್ಯಕ್ರಮಕ್ಕೆ ಆಮಂತ್ರಣ ಕೊಡಲು ಭದ್ರಾವತಿ ಶಾಸಕರ ಮನೆಗೆ ಆಯನೂರು ಮಂಜುನಾಥ್ ಅವರ ಮನೆಗೆ ಹೋಗಿದ್ದೆ. ಹಾಗೆಂದು ನಾನು ಅವರ ಪಕ್ಷಕ್ಕೆ (ಕಾಂಗ್ರೆಸ್) ಸೇರಿದ್ದೇನೆಯೇ? ಯೋಗೀಶ್ ಹಾಗೂ ಅವರ ತಂದೆ ಇಬ್ಬರ ಹೆಸರನ್ನೂ ಆಮಂತ್ರಣ ಪತ್ರದಲ್ಲಿ ಹಾಕಿದ್ದು ಕರೆಯಲು ಅವರ ಮನೆಗೆ ಹೋಗಿದ್ದೆ. ಅಲ್ಲಿಯೇ ಆ ಬಗ್ಗೆ ಕೇಳಬಹುದಿತ್ತು. ಇಲ್ಲಿ ಬಂದು ಪ್ರಚಾರ ಪಡೆಯುವುದು ಬೇಡವಾಗಿತ್ತು’ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.