ADVERTISEMENT

ಪಕ್ಷಿಧಾಮದಿಂದ ವಾಪಸಾಗುತ್ತಿದ್ದಾರೆ ‘ಅತಿಥಿಗಳು’

ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡರೆ ಅನುಕೂಲ

ರಾಘವೇಂದ್ರ ಟಿ.
Published 2 ನವೆಂಬರ್ 2023, 6:30 IST
Last Updated 2 ನವೆಂಬರ್ 2023, 6:30 IST
ಸೊರಬ ತಾಲ್ಲೂಕಿನ ಗುಡವಿ ಪಕ್ಷಿಧಾಮ
ಸೊರಬ ತಾಲ್ಲೂಕಿನ ಗುಡವಿ ಪಕ್ಷಿಧಾಮ   

ಸೊರಬ: ಗುಡವಿ ಪಕ್ಷಿಧಾಮದಿಂದ ಅನತಿ ದೂರದಲ್ಲಿ ಹರಿಯುತ್ತಿರುವ ವರದಾ ನದಿಯಿಂದ ನೀರೆತ್ತಲು ಏತ ನೀರಾವರಿ ಯೋಜನೆ ಕೈಗೆತ್ತಿಕೊಂಡರೆ ಪಕ್ಷಿಧಾಮದಲ್ಲಿ ಬಾನಾಡಿಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗುವ ಜೊತೆಗೆ, ಪಕ್ಷಿಗಳ ನಿನಾದವನ್ನು ವರ್ಷಪೂರ್ತಿ ಪ್ರವಾಸಿಗರು ಆಲಿಸಿ ಸಂತೋಷಪಡಲು ಸಾಧ್ಯವಾಗಬಲ್ಲದು.

ಹೌದು! ಸಮೀಪದ ಗುಡವಿ ಬಳಿ ಇರುವ ಪಕ್ಷಿಧಾಮದತ್ತ ಸಂತಾನೋತ್ಪತ್ತಿಗಾಗಿ ವಿವಿಧ ದೇಶಗಳ ನೂರಾರು ಬಗೆಯ ಪಕ್ಷಿಗಳು ಪ್ರತಿ ವರ್ಷ ವಲಸೆ ಬರುತ್ತವೆ. ಜೂನ್‌ನಿಂದ‌ ನವೆಂಬರ್‌ವರೆಗೆ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ತಮ್ಮ ಸಂತತಿ ವೃದ್ಧಿಸಿಕೊಂಡು ತವರಿಗೆ ವಾಪಸಾಗುತ್ತವೆ. ಆದರೆ, ಈ ವರ್ಷ ಬರಗಾಲದಲ್ಲಿ ನೀರು, ಆಹಾರದ ಕೊರತೆಯಿಂದ ಪಕ್ಷಿಗಳ ಸಂತಾನಾಭಿವೃದ್ಧಿಗೆ ಹಿನ್ನಡೆಯಾಗಿದೆ.

ಪಕ್ಷಿಗಳು ವಲಸೆ ಬರುವಂತಾಗಲು ಹಾಗೂ ಪ್ರವಾಸಿಗರನ್ನು ಸೆಳೆಯಬೇಕಾದರೆ ಪಕ್ಷಿಧಾಮದ ನೈಸರ್ಗಿಕತೆಗೆ ಧಕ್ಕೆಯಾಗದಂತೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಕ್ಷಿಧಾಮದ ಸಮೀಪದಲ್ಲಿ ಹರಿಯುವ ವರದಾ ನದಿಯ‌ ನೀರನ್ನು 83 ಎಕರೆ ವಿಸ್ತೀರ್ಣವುಳ್ಳ ಕೆರೆಗೆ ಹಾಯಿಸಿದರೆ ಪಕ್ಷಿಧಾಮವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ನೋಡಬಹುದು. ಆದಾಯವೂ ಹರಿದುಬರುವ ಜೊತೆಗೆ ಪ್ರಕೃತಿ ಸೊಬಗನ್ನು ಸವಿಯುವ ಪ್ರವಾಸಿಗರಿಗೆ, ಪಕ್ಷಿಪ್ರಿಯರಿಗೆ ಸಂಪೂರ್ಣ ಮನರಂಜನೆ ದೊರೆಯಲಿದೆ ಎಂಬುದು ಸ್ಥಳೀಯರ ಮನವಿಯಾಗಿದೆ.

ADVERTISEMENT

ಮಳೆಗಾಲದಲ್ಲಿ ಮಾತ್ರ ಪಕ್ಷಿಗಳಿಗೆ ಪೂರಕ ವಾತಾವರಣ ಇರುತ್ತದೆ. ಮಳೆಯ ಕೊರತೆ ಇರುವುದರಿಂದ ಕೆರೆ ಖಾಲಿ ಇದ್ದು, ಪಕ್ಷಿಧಾಮದಲ್ಲಿ ಆಹಾರದ ಕೊರತೆ ಉಂಟಾಗಿ ಪಕ್ಷಿಗಳ‌ ಮಾರಣಹೋಮ ನಡೆದಿದೆ. ಸಾಂಕ್ರಾಮಿಕ ರೋಗ ಹರಡಿ ಇತರೆ ಪಕ್ಷಿಗಳು ಮೃತಪಡುತ್ತಿವೆ.

ಅಲ್ಲದೇ ಬೇರೆ ಬೇರೆ ಕಾಡುಪ್ರಾಣಿಗಳೂ ಆಹಾರಕ್ಕಾಗಿ ಪಕ್ಷಧಾಮದತ್ತ ಅರಸಿ‌ ಬರುತ್ತವೆ. ಪಕ್ಷಿಧಾಮದಲ್ಲಿ ಮಂಗಗಳು ಬೀಡು ಬಿಟ್ಟಿದ್ದರಿಂದ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಮರಿಗಳೊಂದಿಗೆ ಅವಧಿಗೂ ಮುನ್ನವೇ ವಾಪಸಾಗುತ್ತಿವೆ. ಇದರಿಂದ ಪಕ್ಷಿಧಾಮ‌ ಬರಡು ಧಾಮವಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಗುಡವಿ ಪಕ್ಷಿಧಾಮದಲ್ಲಿ ಆಹಾರಕ್ಕಾಗಿ ದಾಳಿಯಿಟ್ಟ ಮಂಗಗಳು
ಗುಡವಿ ಪಕ್ಷಿಧಾಮದ ಸಮೀಪ ಹರಿಯುವ ವರದಾ ನದಿ
ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಸಾರ ಪಕ್ಷಿಧಾಮದ ನೈಸರ್ಗಿಕತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾತ್ರ ಇಲಾಖೆ ಗಮನ ನೀಡುತ್ತಿದೆ.
ಸಂಧ್ಯಾ ವಲಯ ಅರಣ್ಯಾಧಿಕಾರಿ ವನ್ಯಜೀವಿ ವಿಭಾಗ ಕಾರ್ಗಲ್

ಏತನೀರಾವರಿಯಿಂದ ಪಕ್ಷಿಧಾಮಕ್ಕೆ ಅನುಕೂಲ ವರದಾ ನದಿಯು ಗುಡವಿ ಪಕ್ಷಿಧಾಮದ ಸಮೀಪದಲ್ಲೇ ಹರಿಯುತ್ತಿದೆ. ಈಗಾಗಲೇ ನದಿಗೆ ಅಡ್ಡಲಾಗಿ ₹ 5 ಕೋಟಿ ವೆಚ್ಚದ ಸೇತುವೆಯು ನಿರ್ಮಾಣ ಹಂತದಲ್ಲಿದೆ. ಇದರಿಂದ ಬನವಾಸಿ ಹಾಗೂ ಶಿರಸಿ ಮಾರ್ಗವಾಗಿ ಪಕ್ಷಿಧಾಮ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ರೀತಿ ಗುಡವಿ ಸಮೀಪ ಏತ ನೀರಾವರಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಮಗಾರಿ ಆರಂಭಗೊಂಡರೆ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕುವ ಜತೆಗೆ ಪಕ್ಷಿಧಾಮದಲ್ಲಿನ ಕೆರೆಗೂ ನೀರು ತುಂಬಿಸಲು ಸಾಧ್ಯವಾಗಲಿದೆ. ಇದರಿಂದ ಪಕ್ಷಿಗಳು ವರ್ಷಪೂರ್ತಿ ಪಕ್ಷಿಧಾಮದಲ್ಲಿ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲಿದೆ. ‌83 ಎಕರೆ ವಿಶಾಲ ಕೆರೆಗೆ ನದಿಯಿಂದ ನೀರೆತ್ತುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆ ಜಾರಿಯಾದರೆ ವರ್ಷವಿಡೀ ಪಕ್ಷಿಗಳು ಈ ಧಾಮದತ್ತ ಹಾರಿಬರಲಿವೆ. ಪಕ್ಷಿಪ್ರಿಯರೂ ಬರಲು ಅನುವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.