ADVERTISEMENT

ಸಿಗಂದೂರು ಲಾಂಚ್: ಸುರಕ್ಷತೆ ನಿರ್ಲಕ್ಷ್ಯ

ಸಿಬ್ಬಂದಿ ಕಾರ್ಯವೈಖರಿಗೆ ಪ್ರಯಾಣಿಕರು, ಸ್ಥಳೀಯರ ಆಕ್ರೋಶ

ಎಂ.ರಾಘವೇಂದ್ರ
Published 6 ಜನವರಿ 2020, 10:55 IST
Last Updated 6 ಜನವರಿ 2020, 10:55 IST
ಸಾಗರ ತಾಲ್ಲೂಕಿನ ಸಿಗಂದೂರಿಗೆ ತೆರಳಲು ಅಂಬಾರಗೋಡ್ಲು-–ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್‌ನ ಬಾಗಿಲ ಅಪಾಯಕಾರಿ ಸ್ಥಳದಲ್ಲಿ ಪ್ರಯಾಣಿಕರು ನಿಂತಿರುವುದು
ಸಾಗರ ತಾಲ್ಲೂಕಿನ ಸಿಗಂದೂರಿಗೆ ತೆರಳಲು ಅಂಬಾರಗೋಡ್ಲು-–ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್‌ನ ಬಾಗಿಲ ಅಪಾಯಕಾರಿ ಸ್ಥಳದಲ್ಲಿ ಪ್ರಯಾಣಿಕರು ನಿಂತಿರುವುದು   

ಸಾಗರ: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂದೂರಿಗೆ ತೆರಳಲು ಪ್ರವಾಸಿಗರು ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸಂಚರಿಸುವ ಲಾಂಚ್‌ನಲ್ಲೇ ಪ್ರಯಾಣಿಸಬೇಕಿದೆ. ಅಂತೆಯೆ ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಕರೂರು ಹೋಬಳಿಯ ಜನರೂ ತಾಲ್ಲೂಕು ಕೇಂದ್ರಕ್ಕೆ ಬರಲು ಇಲ್ಲಿನ ಲಾಂಚ್ ಅನ್ನೇ ಆಶ್ರಯಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಇಲ್ಲಿ ಸಂಚರಿಸುವ ಎರಡು ಲಾಂಚ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂದರ್ಭದಲ್ಲಿ ಲಾಂಚ್ ಪ್ರಯಾಣದ ಸುರಕ್ಷತೆಯ ಬಗ್ಗೆ ಹತ್ತು ಹಲವು ಪ್ರಶ್ನೆಗಳು ಎದುರಾಗಿದ್ದವು.

ಲಾಂಚ್ ಡಿಕ್ಕಿ ಪ್ರಕರಣದ ನಂತರವಾದರೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಹಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ.ಇತ್ತೀಚಿನ ದಿನಗಳಲ್ಲಿ ಸಿಗಂದೂರಿಗೆ ಬರುವ
ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸ್ಥಳೀಯರು ಸಾಗರಕ್ಕೆ ಬರಲು ಹಾಗೂ ಮರಳಿ ತಮ್ಮೂರಿಗೆ ಹೋಗಲು ಪರದಾಡುವಂತಾಗಿದೆ.

ADVERTISEMENT

ಈ ನಡುವೆ ಲಾಂಚ್‌ಗೆ ವಾಹನಗಳನ್ನು ಏರಿಸುವಾಗ ಅಲ್ಲಿನ ಸಿಬ್ಬಂದಿ ಯಾವ ಮುಂಜಾಗ್ರತೆ ವಹಿಸ
ಬೇಕೊ ಅದನ್ನು ವಹಿಸುತ್ತಿಲ್ಲ ಎನ್ನುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಲಾಂಚ್‌ನ ಬಾಗಿಲು ಮುಚ್ಚುವಷ್ಟು ಸ್ಥಳಾವಕಾಶ ಇರುವ ಜಾಗದಲ್ಲಿ ಮಾತ್ರ ವಾಹನಗಳನ್ನು ತುಂಬಿಸುವುದು ಸುರ
ಕ್ಷಿತ ಕ್ರಮ. ಆದರೆ ದಡದಿಂದ ಲಾಂಚ್ ಹೊರಟ ನಂತರವೂ ಬಾಗಿಲು ಮುಚ್ಚದೆ ಅದರ ತುದಿಯಲ್ಲೇ ವಾಹನಗಳು ನಿಲ್ಲಲು ಸಿಬ್ಬಂದಿಅವಕಾಶ ಕಲ್ಪಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

ಈ ವಿಷಯದಲ್ಲಿ ಕೆಲವೊಮ್ಮೆ ಪ್ರವಾಸಿಗರ ಹಾಗೂ ಸ್ಥಳೀಯರ ಅವಸರದ ಮನೋಭಾವವೂ ಸಿಬ್ಬಂದಿ ಮೇಲೆ ಒತ್ತಡ ತರುತ್ತಿದೆ ಎನ್ನಲಾಗುತ್ತಿದೆ. ಆದರೆ ಜೀವಕ್ಕೆ ಕುತ್ತು ತರುವ ಸಂದರ್ಭ ಇರುವಾಗ ಲಾಂಚ್‌ನ ಸಿಬ್ಬಂದಿ ಇಂತಹ ಒತ್ತಡಗಳಿಗೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಪ್ರಯಾಣಿಕರು ಒತ್ತಾಯಿಸುತ್ತಾರೆ.

ಲಾಂಚ್‌ನ ಬಾಗಿಲಿನಲ್ಲೇ ವಾಹನಗಳು ನಿಲ್ಲಲು ಅವಕಾಶ ಮಾಡಿಕೊಟ್ಟು ಏನಾದರೂ ಅನಾಹುತವಾದರೆ ಅದರ ಜವಾಬ್ದಾರಿಯನ್ನು ಸಿಬ್ಬಂದಿ ವರ್ಗದವರೇ ಹೊರಬೇಕಾಗುತ್ತದೆ.ಬರುವ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಕಾಲ ಸಿಗಂದೂರಿನಲ್ಲಿ ಜಾತ್ರೆ ನಡೆಯಲಿದ್ದು, 50 ಸಾವಿರ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಈ ವೇಳೆಯಲ್ಲಿ ಲಾಂಚ್‌ನಲ್ಲಿ ನೂಕುನುಗ್ಗಲು ಉಂಟಾಗುವುದು ಸಾಮಾನ್ಯ. ಸಿಬ್ಬಂದಿ ಮತ್ತಷ್ಟು ಹೆಚ್ಚಿನ ಎಚ್ಚರ ವಹಿಸಬೇಕಿದೆ ಎಂಬುದು ಸ್ಥಳೀಯರ ಒತ್ತಾಯ.

ಲಾಂಚ್ ಮುಖಾಮುಖಿ ಡಿಕ್ಕಿ ಪ್ರಕರಣದ ನಂತರವಾದರೂ ಕೊರತೆ ಇರುವ ಸಿಬ್ಬಂದಿ ನೇಮಕವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆ ವೇಳೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ಶಾಸ್ತ್ರ ಮುಗಿಸಿದ್ದನ್ನು ಬಿಟ್ಟರೆ ಸಿಬ್ಬಂದಿ ನೇಮಕಕ್ಕೆ ಮುಂದಾಗಿಲ್ಲ.ಪ್ರಕರಣಕ್ಕೆ ಸಂಬಂಧ
ಪಟ್ಟಂತೆ ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಅವಘಡ ಸಂಭವಿಸಿದೆ ಎನ್ನುವ ಕಾರಣಕ್ಕೆ ಮಾನವೀಯ ನೆಲೆಯಲ್ಲಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ.

ಭವಿಷ್ಯದಲ್ಲಾದರೂ ಲಾಂಚ್‌ನ ಸಿಬ್ಬಂದಿ ಪ್ರಯಾಣಿಕರ ಸಂಚಾರ ಹಾಗೂ ಅವರ ವಾಹನಗಳ ನಿಲುಗಡೆ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.