ಸೊರಬ: ಸರ್ಕಾರಿ ಕೆಲಸದ ನಿಮಿತ್ತ ವರ್ಗಾವಣೆಗೊಂಡು ಬರುವ ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಸುಸಜ್ಜಿತ ಕಟ್ಟಡಗಳನ್ನು ಯೋಗ್ಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸರ ಪಾತ್ರ ಹಿರಿದಾಗಿದೆ. ಸಾರ್ವಜನಿಕರು ಕೂಡ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇಲಾಖೆ ಜೊತೆ ಕೈಜೋಡಿಸಬೇಕಿದೆ ಎಂದರು.
ಜಿಲ್ಲೆಯ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ವಿದ್ಯುತ್ ಉಪ ಕೇಂದ್ರಗಳನ್ನು ಆರಂಭಿಸುವ ಜೊತೆಗೆ ಸೋಲಾರ್ ಘಟಕಗಳನ್ನು ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.
ತಾಲ್ಲೂಕಿನ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ಹಾಗೂ ತಡೆಗೋಡೆ ನಿರ್ಮಾಣಕ್ಕೆ ₹62 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮುಂದಿನ ಒಂದು ತಿಂಗಳಲ್ಲಿ ತಾಲ್ಲೂಕಿನಲ್ಲಿ ₹140 ಕೋಟಿ ವೆಚ್ಚಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನ ಶಾಲೆಗಳಲ್ಲಿ ಶೇ 95ರಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಾರದ ಎರಡು ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಹಯೋಗದೊಂದಿಗೆ ವಾರದ ಆರು ದಿನಗಳಿಗೆ ವಿಸ್ತರಿಸಲಾಗಿದೆ. ಅದಕ್ಕಾಗಿ ಸರ್ಕಾರ ₹1,500 ಕೋಟಿ ಹೆಚ್ಚುವರಿ ವೆಚ್ಚ ಭರಿಸಲಿದೆ ಎಂದರು.
ಅರಣ್ಯದಂಚಿನಲ್ಲಿ ವಾಸಿಸುವ ವನವಾಸಿಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಕ್ರಮ ವಹಿಸಲಾಗಿದೆ. ಯಾರನ್ನೂ ಒಕ್ಕಲೆಬ್ಬಿಸುವ ಉದ್ದೇಶ ಸರ್ಕಾರದ ಮುಂದಿಲ್ಲ. ಹೊಸದಾಗಿ ಅರಣ್ಯ ಭೂಮಿ ಒತ್ತುವರಿ ಮಾಡುವವರನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಐಜಿಪಿ ರಾಮಚಂದ್ರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಮಿಥುನ್ ಕುಮಾರ್, ಡಿವೈಎಸ್‌ಪಿ ಕೇಶವ, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಇಒ ಪ್ರದೀಪಕುಮಾರ್ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.