ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗೆ ವಿಶೇಷ ಕಾಳಜಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 14:53 IST
Last Updated 9 ಜೂನ್ 2020, 14:53 IST

ಶಿವಮೊಗ್ಗ: ಮಲೆನಾಡಿನಲ್ಲಿ ಜೂನ್‌ ಅಂತ್ಯದ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೈಗೊಂಡ ಸಿದ್ಧತೆಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಲೆನಾಡಿನ ಒಳ ಪ್ರದೇಶಗಳಿಂದ ಬರುವ ಮಕ್ಕಳು ಹಾಗೂ ಅವರನ್ನು ಕರೆ ತರುವ ಪೋಷಕರಿಗೆ ಅಗತ್ಯ ನೆರವು ಒದಗಿಸಬೇಕು. ಸಾಧ್ಯವಾಗುವ ಕಡೆ ವಾಹನ ಸೌಲಭ್ಯ ಕಲ್ಪಿಸಬೇಕು. ಕೊರೊನಾ ಸುರಕ್ಷತೆ ಜತೆಗೆ, ಮಳೆಯಿಂದಲೂ ರಕ್ಷಣೆ ನೀಡಬೇಕು ಎಂದರು.

ADVERTISEMENT

ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ದಿವಾಕರ್ ಮಾತನಾಡಿ, ಮಳೆಯ ಕಾರಣ ಇಂಕ್‌ ಹಾಗೂ ಜೆಲ್‌ ಪೆನ್ ಬಳಸಬಾರದು. ಎಲ್ಲರೂ ಬಾಲ್ಪೆನ್‌ ತರುವಂತೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಪುನರ್‌ಮನನ ತರಗತಿ:ಚಂದನ ವಾಹಿನಿ ಮೂಲಕ ಈಗಾಗಲೇ ವಿದ್ಯಾರ್ಥಿಗಳಿಗೆ ಪುನರ್‌ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಜೂನ್ 12ರಿಂದ 17ರವರೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಹಳೆ ಪ್ರಶ್ನೆ ಪತ್ರಿಕೆ ಆಧಾರಿತ ಪುನರ್‌ಮನನ ತರಗತಿಗಳು ನಡೆಯಲಿವೆ. ಕೊರೊನಾ ಕಾರಣ ಶೈಕ್ಷಣಿಕ ವ್ಯವಸ್ಥೆ ಬದಲಾಗಿದೆ. 1ನೇ ತರಗತಿಯಿಂದ 10ನೇ ತರಗತಿವರೆಗೆ ಟಿ.ವಿ. ಮಾಧ್ಯಮದ ಮೂಲಕ ಕಲಿಕೆ ಕ್ರಮ ಆರಂಭಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದರು.

ಇಂದು ಅಂತಿಮ ಹಂತದ ಸಮಾಲೋಚನೆ:ಆನ್‌ಲೈನ್‌ ತರಗತಿ ಕುರಿತು ಸ್ಪಷ್ಟ ಮಾರ್ಗಸೂಚಿ ಸಿದ್ಧಪಡಿಸಲು ನಿಮ್ಹಾನ್ಸ್ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಜೂನ್‌10ರಂದು ಅಂತಿಮ ಹಂತದ ಸಮಾಲೋಚನೆ ನಡೆಯಲಿದೆ. ಆ ಬಳಿಕ ಸ್ಪಷ್ಟ ನಿರ್ಧಾರ ಪ್ರಕಟಿಸಲಾಗುವುದು ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.