ADVERTISEMENT

ಶಿವಮೊಗ್ಗ| ಸದೃಢ ವ್ಯಕ್ತಿತ್ವವೇ ಮಹಿಳೆಯ ಪರಿಪೂರ್ಣತೆ: ಡಾ. ಎಚ್.ಕೆ.ಹಸೀನಾ

ಮಹಿಳಾ ದಿನಾಚರಣೆ: ಡಾ.ಹಸೀನಾ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 6:46 IST
Last Updated 27 ಮಾರ್ಚ್ 2023, 6:46 IST
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಎಚ್.ಕೆ.ಹಸೀನಾ ಮಾತನಾಡಿದರು
ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಭಾನುವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಎಚ್.ಕೆ.ಹಸೀನಾ ಮಾತನಾಡಿದರು   

ಶಿವಮೊಗ್ಗ: ’ದೈಹಿಕ ಬದಲಾವಣೆಯಿಂದ ಮಹಿಳೆಯ ಅಭಿವೃದ್ಧಿ ಸಲ್ಲದು. ಮಾನಸಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯೂ ಆಗಬೇಕು‘ ಎಂದು ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದ ನಿರ್ದೇಶಕಿ ಡಾ. ಎಚ್.ಕೆ.ಹಸೀನಾ ಹೇಳಿದರು.

ಇಲ್ಲಿನ ಕರ್ನಾಟಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ 'ಮಹಿಳಾ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪ್ರಾಚೀನ ಇತಿಹಾಸದಿಂದ ಹೆಣ್ಣನ್ನು ಭುವಿಗೆ ಹೋಲಿಸಲಾಗಿದೆ. ಹೆಣ್ಣು ನಾವು ಬೀಳದಂತೆ ನಡೆಯುವುದು ಕಲಿಸಿದ್ದಾಳೆ. ಒಕ್ಕಲುತನವನ್ನು ತೋರಿಸಿಕೊಟ್ಟಿದ್ದಾಳೆ. 12 ನೇ ಶತಮಾನದಲ್ಲಿ ಬಂದ ಬಸವಾದಿ ಶರಣರು ಮಹಿಳೆಯ ಕಷ್ಟ ಸಂಕೋಲೆಯನ್ನು ಪ್ರಪಂಚಕ್ಕೆ ಬಿತ್ತರಿಸಿದರು. ಹೆಣ್ಣು ಪ್ರಪಂಚದಲ್ಲಿ ಅಸಾಧ್ಯವಾದದ್ದನ್ನು ಸಾಧಿಸಬಲ್ಲಳು ಎಂದು ತೋರಿಸಿಕೊಟ್ಟದ್ದು ಇದೇ ಬಸವಾದಿ ಶರಣರು. ಅದರಿಂದ ಮಹಿಳೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಹೊಂದಲು ಸಾಧ್ಯವಾಗಿದೆ ಎಂದರು.

ADVERTISEMENT

ಡಾ. ಬಿ.ಆರ್. ಅಂಬೇಡ್ಕರ್ ಇತಿಹಾಸ ಅರಿಯದವನು, ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ಇತಿಹಾಸ ಅರಿತರೆ ಮಾತ್ರ ಹೆಣ್ಣಿನ ಅಸ್ತಿತ್ವ ತಿಳಿಯುತ್ತದೆ ಎಂದ ಅವರು, ಸದೃಢ ಸಮಾಜ ನಿರ್ಮಾಣಕ್ಕೆ ಹೆಣ್ಣು ಆದಿ ಕಾಲದಿಂದ ಶ್ರಮಿಸಿದ್ದಾಳೆ. ಅದಕ್ಕೆ ಪ್ರೋತ್ಸಾಹ ನೀಡಿದ್ದು ಇದೇ ಬಸವಾದಿ ಶರಣರು ಎಂದರು.

ಹೆಣ್ಣು ಬದಲಾವಣೆ ಯುಗಕ್ಕೆ ಹೆಜ್ಜೆ ಇರಿಸಿದ್ದಾಳೆ. ಉದಾಹರಣೆಗೆ ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಿ 60 ವರ್ಷ ಕಳೆದರು ಚಾಕೊಲೇಟ್ ಕೊಡಿಸುವವರು ಇರಲಿಲ್ಲ. ಈಗ ವೈವಾಹಿಕ ಜೀವನ ಎರಡು ವರ್ಷ ಪೂರೈಸಿದರೆ ಪತ್ರಿಕೆಯಲ್ಲಿ ಜಾಹಿರಾತು ಕೊಡುತ್ತಾರೆ. ಇದು ಮಹಿಳಾ ಸಬಲೀಕರಣ ಆಗಿದೆ ಎಂಬುದರ ಅರ್ಥ ಎಂದು ಚಟಾಕಿ ಹಾರಿಸಿದರು.

ಕರ್ನಾಟಕ ಸಂಘದ ಹಿಂದಿನ ಅಧ್ಯಕ್ಷೆ ವಿಜಯಾ ಶ್ರೀಧರ್ ಮಾತನಾಡಿ, ’ಮಹಿಳೆಯರಿಗೆ ಸಮಾಜ ಈಗಲೂ ಪೂರಕವಾಗಿಲ್ಲ. ಹೆಣ್ಣು ಭಯದಿಂದ ಬದುಕು ಸಾಗಿಸುವ ಸ್ಥಿತಿ ದೂರವಾಗಿಲ್ಲ. ಅತ್ಯಾಚಾರ, ಕೊಲೆ, ದರೋಡೆ ಮೂಲಕ ಹೆಣ್ಣನ್ನು ಶೋಷಣೆ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಮಾಧ್ಯಮದಲ್ಲಿ 'ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿದೆ' ಎಂಬ ಸುದ್ದಿ ನೋಡುತ್ತಿದ್ದರೆ ಹೆಣ್ಣಿಗೆ ರಕ್ಷಣೆ ಎಲ್ಲಿದೆ ಅನ್ನಿಸಿತು. ಭಯದಲ್ಲಿ ಬದುಕುವ ಸ್ಥಿತಿ ತಲುಪಿದ್ದೇವೆ‘ ಎಂದು ಆತಂಕ ವ್ಯಕ್ತಪಡಿಸಿದರು.

ವಿದುಷಿ ವೀಣಾ ನಾಯಕ್ ಅವರು ದಾಸರ ಪದ ಹಾಡಿದರು. ಎಸ್. ತುಷಾರ ಗೌರಿ ಹರಿಕಥೆ ನಡೆಸಿಕೊಟ್ಟರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಪ್ರೊ. ಆಶಾಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.