ADVERTISEMENT

ದೇಶದ ಭವಿಷ್ಯವನ್ನು ನಾವೀನ್ಯತೆ ಮುನ್ನಡೆಸಲಿದೆ: ವಿಜ್ಞಾನಿ ಪ್ರಶಾಂತ್ ಮಿಶ್ರಾ

ವಿದ್ಯಾರ್ಥಿಗಳ ನಾವೀನ್ಯ ಯೋಜನೆಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:22 IST
Last Updated 2 ಆಗಸ್ಟ್ 2025, 7:22 IST
ಶಿವಮೊಗ್ಗದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಏರ್ಪಡಿಸಿದ್ದ 48 ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಪ್ರಶಾಂತ್ ಮಿಶ್ರಾ ಉದ್ಘಾಟಿಸಿದರು.
ಶಿವಮೊಗ್ಗದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಏರ್ಪಡಿಸಿದ್ದ 48 ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಪ್ರಶಾಂತ್ ಮಿಶ್ರಾ ಉದ್ಘಾಟಿಸಿದರು.   

ಶಿವಮೊಗ್ಗ: ಪಠ್ಯ ಆಧಾರಿತ ಯೋಚನೆಗಳಿಗಿಂತ ನಾವೀನ್ಯತೆ ಆಧಾರಿತ ಯೋಜನೆಗಳು ದೇಶದ ಭವಿಷ್ಯವನ್ನು ಮುನ್ನಡೆಸಲಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಪ್ರಶಾಂತ್ ಮಿಶ್ರಾ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಏರ್ಪಡಿಸಿದ್ದ 48 ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾತಾವರಣದಲ್ಲಿನ ತೊಡಕುಗಳನ್ನು ಸವಾಲಾಗಿ ಸ್ವೀಕರಿಸಿ. ನಾವೀನ್ಯತೆಯ ಸ್ಪರ್ಶ ನೀಡುವ ಮೂಲಕ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸಿ. ಬದುಕಿನಲ್ಲಿ ಹೊಸತನದ ಆಲೋಚನೆಗಳಿದ್ದರೆ ಮಾತ್ರ ಮುನ್ನಡೆ ಸಾಧ್ಯ.ಅನುಭವ ಆಧಾರಿತ ಕಲಿಕೆ ಹೊಸ ಜ್ಞಾನವನ್ನು ನೀಡಿದರೆ, ಜ್ಞಾನದ ತಳಹದಿ ಆವಿಷ್ಕಾರಿ ವಿಜ್ಞಾನವಾಗಿ ರೂಪುಗೊಳ್ಳುತ್ತದೆ.

ADVERTISEMENT

ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ. ಮೂಲ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದ ತಾಂತ್ರಿಕ ವಿಚಾರಗಳನ್ನು ಅಂತರಶಿಸ್ತೀಯಗೊಳಿಸಿ. ಇದರಿಂದ ಹೆಚ್ಚು ಆವಿಷ್ಕಾರಿ ಯೋಜನೆಗಳು ರೂಪಗೊಳ್ಳಲು ಸಾಧ್ಯ. ಯಾವಾಗಲೂ ಇಷ್ಟಪಟ್ಟು ಕೆಲಸ ಮಾಡಿ, ಕುತೂಹಲದಿಂದಿರಿ, ಸಮಸ್ಯೆ ಪರಿಹರಿಸುವ ಕೌಶಲ್ಯ ಸದಾ ಉದ್ದೀಪನಗೊಳಿಸಿಕೊಳ್ಳಿ ಎಂದು ಆಶಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಮಾತನಾಡಿ, ನಿರ್ದಿಷ್ಟವಾದ ಅಧ್ಯಯನವನ್ನು ನಮ್ಮ ಸಂಸ್ಕಾರದ ತಳಹದಿಯಲ್ಲಿ ಮುನ್ನಡೆಸಬೇಕಿದೆ‌. ಹಣದ ಸಂಪಾದನೆಯ ಆದ್ಯತೆಗಿಂತ ಅನುಭವ ಮತ್ತು ಉತ್ತಮ ಸಂಬಂಧಗಳನ್ನು ಸಂಪಾದಿಸುವತ್ತ ಯುವ ಸಮೂಹ ಹೆಚ್ಚು ಆದ್ಯತೆ ನೀಡಲಿ ಎಂದರು. 

ವೇದಿಕೆಯಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಕಾಲೇಜಿನ ಪ್ರಾಂಶುಪಾಲ ವೈ.ವಿಜಯಕುಮಾರ್, ಸಂಯೋಜಕರಾದ ಬಿ.ಎನ್‌.ರವಿಕುಮಾರ್, ಎಸ್.ಜಿ.ಚೇತನ್ ಉಪಸ್ಥಿತರಿದ್ದರು. ಪ್ರೊ.ಎಚ್.ಬಿ.ಸುರೇಶ್ ನಿರೂಪಿಸಿದರು.

ಸಂಶೋಧನೆ ಮತ್ತು ನಾವೀನ್ಯತೆ ಎಂಬುದು ರಾತ್ರೋರಾತ್ರಿ ಒಡಮೂಡುವ ವಿಚಾರವಲ್ಲ. ಸಮೀಕ್ಷೆಯಿಂದ ಮೊದಲುಗೊಂಡು ಪೇಟೆಂಟ್ ವರೆಗೆ ಪ್ರತಿ ಹಂತದಲ್ಲಿ ವಿಭಿನ್ನ ಆಲೋಚನೆಗಳು ಬೇಕಿದೆ. ಅದಕ್ಕೆ ಕೆ.ಎಸ್.ಸಿ.ಎಸ್.ಟಿ ಪೂರಕ ವೇದಿಕೆ
–ಪ್ರೊ.ಅಶೋಕ.ಎಂ.,ರಾಯಚೂರು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ
ಅವಶ್ಯಕತೆ ಆವಿಷ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಸಮಾಜದ ಅವಶ್ಯಕತೆಗಳನ್ನು ನಾವೀನ್ಯತೆಯ ಮೂಲಕ ಬಗೆಹರಿಸಿ. ಶಾಲೆಯಲ್ಲಿ ಅಗ್ರಸ್ಥಾನ ಪಡೆದವರಿಗಿಂತ ಜೀವನದಲ್ಲಿ ಅಗ್ರಸ್ಥಾನ ಪಡೆದವ ಯಶಸ್ವಿ ವ್ಯಕ್ತಿ.
–ಜಿ.ಎಸ್. ನಾರಾಯಣ ರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.