ADVERTISEMENT

ಭಾರತ್ ಬಂದ್‌ಗೆ ಬೆಂಬಲ: ಬಿಜೆಪಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 4:03 IST
Last Updated 26 ಸೆಪ್ಟೆಂಬರ್ 2021, 4:03 IST
ಎಚ್‌.ಎಸ್‌. ಸುಂದರೇಶ್
ಎಚ್‌.ಎಸ್‌. ಸುಂದರೇಶ್   

ಶಿವಮೊಗ್ಗ: ಕೃಷಿ, ವಿದ್ಯುತ್ ಮತ್ತಿತರ ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಅಂಗವಾಗಿ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.

ದೆಹಲಿಯಲ್ಲಿ 10 ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ತಿರುಗಿಯೂ ನೋಡುತ್ತಿಲ್ಲ. ಇದೊಂದು ಪ್ರಾಯೋಜಿತ ಕಾರ್ಯಕ್ರಮ ಎಂದು ರೈತರನ್ನೇ ಹಂಗಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರ ಬದುಕನ್ನೇ ಕಸಿದುಕೊಂಡಿವೆ. ಸೆ.27ರಂದು ಶಿವಮೊಗ್ಗದಲ್ಲಿ ಬಂದ್ ನಡೆಯಲಿದೆ. ಈ ಬಂದ್‍ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ರೈತರು ನಡೆಸುವ ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ನಿಲುವುಗಳಿಂದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜಿಡಿಪಿ ದರ ಪಾತಾಳಕ್ಕಿಳಿದಿದೆ. ಪ್ರಧಾನಮಂತ್ರಿ ಕೋವಿಡ್ ಕ್ಷೇಮ ನಿಧಿಗೆ ದೇಶದ ಹಲವರು ದೇಣಿಗೆ ನೀಡಿದ್ದರು. ಒಂದು ಲಕ್ಷ ಕೋಟಿಗೂ ಹೆಚ್ಚು ಹಣ ನೀಡಲಾಗಿತ್ತು. ಆದರೆ, ಈ ಹಣ ಎಲ್ಲಿದೆ? ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಗೊತ್ತಾಗಿಲ್ಲಎಂದು ದೂರಿದರು.

ADVERTISEMENT

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್‌ ಬಲವಾಗಿ ವಿರೋಧಿಸುತ್ತದೆ. ಯಾವ ಚರ್ಚೆಯೂ ಇಲ್ಲದೇ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಯೋಜನೆಯನ್ನು ತರಾತುರಿ ಜಾರಿಗೊಳಿಸಲಾಗಿದೆ. ಈ ನೀತಿ ಆರ್‌ಎಸ್‌ಎಸ್‌ ಅಜೆಂಡಾ. ಹಳೆಯ ಶಿಕ್ಷಣ ಪದ್ಧತಿಯಲ್ಲಿಯೇ ಇದುವರೆಗೂ ಅವರೆಲ್ಲ ಓದಿಲ್ಲವೇ? ಮೋದಿ ಸೇರಿ ಬಿಜೆಪಿಯ ಎಲ್ಲರೂ ಇದೇ ಶಿಕ್ಷಣದಿಂದಲೇ ತಮ್ಮಸಾಮರ್ಥ್ಯ, ಬುದ್ಧಿವಂತಿಕೆ ಹೆಚ್ಚಿಸಿಕೊಂಡಿಲ್ಲವೇ? ಈಗ ವಿದ್ಯಾರ್ಥಿಗಳಿಗೆ ಹೊರೆಯಾಗಿರುವ ಅರ್ಥವಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ
ರೂಪಿಸುವ ಅಗತ್ಯವಾದರೂ ಏನಿದೆ ಎಂದು ಆಕ್ರೋಶ ಹೊರಹಾಕಿದರು.

‘ಗೃಹ ಸಚಿವ ಆರಗ ಜ್ಞಾನೇಂದ್ರಸಂಪೂರ್ಣ ವಿಫಲವಾಗಿದ್ದಾರೆ. ಅವರ ಜಿಲ್ಲೆಯಲ್ಲೇ ಕೊಲೆ,ಸುಲಿಗೆ, ದರೋಡೆ, ಗಾಂಜಾ ಸೇವನೆ ಸೇರಿ ಅಪರಾಧ ಚಟುವಟಿಕೆ ಎಗ್ಗಿಲ್ಲದೆ
ನಡೆಯುತ್ತಿವೆ. ಶಿವಮೊಗ್ಗದ ಪೊಲೀಸರು ಹೆಲ್ಮೆಟ್‌ ಧರಿಸದವರಿಗೆ ದಂಡ ಹಾಕುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ’ ಎಂದು ದೂರಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಟೀಕಿಸುವುದು ಬಿಟ್ಟರೆ ಬೇರೆಏನೂ ಕೆಲಸವೂ ಮಾಡುತ್ತಿಲ್ಲ. ಶಿವಮೊಗ್ಗ ಅವ್ಯವಸ್ಥೆಯ ತಾಣವಾಗಿದೆ’ ಎಂದು ಟೀಕಿಸಿದರು.

ಮುಖಂಡರಾದ ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮೆಹಕ್ ಷರೀಫ್, ಸಿ.ಎಸ್.ಚಂದ್ರ ಭೂಪಾಲ್, ಸೌಗಂಧಿಕಾ ರಘುನಾಥ್, ಮಾರ್ಟಿಸ್, ಚಂದನ್, ಎನ್.ಡಿ. ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.