ADVERTISEMENT

ರೆಮ್‌ಡಿಸಿವಿರ್ ಅಕ್ರಮ ಮಾರಾಟ ತಡೆಗೆ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 12:41 IST
Last Updated 15 ಮೇ 2021, 12:41 IST

ಶಿವಮೊಗ್ಗ: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ತಡೆಯಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಪ್ರಕರಣಗಳು ಪತ್ತೆಯಾದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿಶಿವಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 172, ಖಾಸಗಿ ಆಸ್ಪತ್ರೆಯಲ್ಲಿ 306 ರೆಮ್‌ಡಿಸಿವಿರ್‌ ಲಭ್ಯವಿದೆ. ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಪತ್ತೆ ಹಚ್ಚಲು ಚುಟುಕು ಕಾರ್ಯಾಚರಣೆ ಸಹ ನಡೆಸಲಾಗುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅಗತ್ಯ ಆಮ್ಲಜನಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಮೆಗ್ಗಾನ್‍ನಲ್ಲಿ 20 ಕೆಎಲ್ ಸೇರಿದಂತೆ ಒಟ್ಟು 51ಕೆಎಲ್‌ ಸಂಗ್ರಹವಿದೆ. ಭದ್ರಾವತಿಯ ವಿಐಎಸ್‍ಎಲ್‍ನಲ್ಲಿ ಆಮ್ಲಜನಕ ಉತ್ಪಾದಿಸಲಾಗುತ್ತಿದೆ. ನೆರೆಯ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೂ ಇಲ್ಲಿಂದ ಪೂರೈಕೆ ಮಾಡಲಾಗುತ್ತಿದೆ ಎಂದರು.

ADVERTISEMENT

104 ವೆಂಟಿಲೇಟರ್‌ಗಳು ನಮ್ಮಲ್ಲಿ ಲಭ್ಯವಿವೆ. ತಾಲೂಕು ಆಸ್ಪತ್ರೆಗಳಲ್ಲಿರುವ ಕೆಲವು ವೆಂಟಿಲೇಟರ್‌ಗಳನ್ನು ಆವಶ್ಯಕತೆಗಳಿಗೆ ಅನುಗುಣವಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಜಿಲ್ಲೆಯಲ್ಲಿ 10,760 ಕೋವಿಶೀಲ್ಡ್ ಮತ್ತು 320 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ. ನಾಲ್ಕು ದಿನಗಳಿಂದ ಕೊರೊನಾ ಪಾಸಿಟಿವ್ ದರ ಕಡಿಮೆಯಾಗಿದೆ. ಶೇ 45ಕ್ಕಿಂತ ಹೆಚ್ಚು ತಲುಪಿದ್ದ ಪಾಸಿಟಿವ್ ರೇಟ್ ಶೇ 40ರ ಆಸುಪಾಸಿಗೆ ಬಂದಿದೆ. ಸಾರ್ವಜನಿಕರ ಸಹಕಾರ ನೀಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.