ADVERTISEMENT

ಪರೀಕ್ಷೆ ಎನ್ನುವುದು ಸಮಾಜಘಾತುಕ ಕೆಲಸ

‘ಕೆ.ಜಿ.ಸುಬ್ರಹ್ಮಣ್ಯ ನೆನಪು–-ನಮನ’ ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ವಿ. ಅಕ್ಷರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 4:42 IST
Last Updated 19 ಏಪ್ರಿಲ್ 2019, 4:42 IST
ಶಿವಮೊಗ್ಗ ಡಿ.ವಿ.ಎಸ್ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕೆ.ಜಿ.ಸುಬ್ರಹ್ಮಣ್ಯ ನೆನಪು-–ನಮನ’ ಕಾರ್ಯಕ್ರಮದಲ್ಲಿ ಪ್ರೊ.ತೀ.ನ. ಶಂಕರನಾರಾಯಣ ಮಾತನಾಡಿದರು
ಶಿವಮೊಗ್ಗ ಡಿ.ವಿ.ಎಸ್ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕೆ.ಜಿ.ಸುಬ್ರಹ್ಮಣ್ಯ ನೆನಪು-–ನಮನ’ ಕಾರ್ಯಕ್ರಮದಲ್ಲಿ ಪ್ರೊ.ತೀ.ನ. ಶಂಕರನಾರಾಯಣ ಮಾತನಾಡಿದರು   

ಶಿವಮೊಗ್ಗ: ಶಿವಮೊಗ್ಗದಲ್ಲಿ ಶಿಕ್ಷಣ ತಜ್ಞ ಕೆ.ಜಿ. ಸುಬ್ರಹ್ಮಣ್ಯ ಅವರಷ್ಟು ಸಾಂಸ್ಕೃತಿಕವಾಗಿ ಶ್ರೀಮಂತವಾದ ವ್ಯಕ್ತಿಯನ್ನೂ ತಾವು ಇದುವರೆಗೂ ಕಂಡಿಲ್ಲ ಎಂದು ರಂಗಕರ್ಮಿ ಕೆ.ವಿ. ಅಕ್ಷರ ಹೇಳಿದರು.

ನಗರದ ಡಿ.ವಿ.ಎಸ್ ಸಂಸ್ಥೆಯ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಕೆ.ಜಿ.ಸುಬ್ರಹ್ಮಣ್ಯ ನೆನಪು-ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಶಿಕ್ಷಣದ ಪರಿಕಲ್ಪನೆಯನ್ನು ನಾವಿಂದು ಮೂಲೆಗುಂಪು ಮಾಡಿದ್ದೇವೆ. ನಮ್ಮ ನಾಡಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಎನ್ನುವ ವಿಷಯದಲ್ಲಿ ಬರುತ್ತಿರುವ ಪುಸ್ತಕಗಳು ಪ್ರಕಟಣೆಗೂ ಯೋಗ್ಯವಾಗುತ್ತಿಲ್ಲ. ಪರೀಕ್ಷೆ ಪಾಸ್ ಮಾಡುವುದು, ಉದ್ಯೋಗ ಹಿಡಿಯುವುದು ಇದಿಷ್ಟನ್ನೇ ಒಂದು ಆದರ್ಶ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ.ಶಿಕ್ಷಕರು ಕೇವಲ ಪ್ರಶ್ನೆಪತ್ರಿಕೆ ತಯಾರಿಸುವುದು, ಮೌಲ್ಯಮಾಪನ ಮಾಡುವುದಷ್ಟೇ ತಮ್ಮ ವೃತ್ತಿಯೆಂದು ಭಾವಿಸಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಪ್ರಸ್ತುತ ದಿನಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಗಳು ಯಾವ ಪ್ರಯೋಜನಕ್ಕೂ ಬರುತ್ತಿಲ್ಲ. ಆದರೂ ಪೊಲೀಸ್ ಕಾವಲಿನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇಂತಹ ಮೂರ್ಖತನದ ಕೆಲಸವನ್ನು ಯಾವ ಬುದ್ಧಿವಂತರೂ ಪ್ರಶ್ನಿಸುತ್ತಿಲ್ಲ. ನನ್ನ ಪ್ರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಲ್ಲಿಸಿದರೆ ಯಾವುದೇ ನಷ್ಟವಾಗುವುದಿಲ್ಲ. ಪರೀಕ್ಷೆ ಎನ್ನುವುದು ಸಮಾಜಘಾತುಕ ಕೆಲಸ. ಈ ಕೆಲಸವನ್ನು ನಿಲ್ಲಿಸದೇ ಇದ್ದರೆ ಸಮಾಜಕ್ಕೆ ಕೇವಲಶಿಕ್ಷಣದ ಶವಗಳು ಸಿಗುತ್ತಾರೆಯೇ ಹೊರತು ಪ್ರಜ್ಞಾವಂತರು ಸಿಗುವುದಿಲ್ಲ’ ಎಂದರು.

ಇಂತಹ ಸಂದರ್ಭದಲ್ಲಿ ಹೊಸ ರೀತಿಯ ಜ್ಞಾನದ ಪ್ರಸಾರ, ಕಲಿಕೆಯ ಕೆಲಸವನ್ನು ಮಾಡಬೇಕು. ಕೆ.ಜಿ.ಸುಬ್ರಹ್ಮಣ್ಯ ಅವರು ಈ ರೀತಿಯ ಕೆಲಸ ಕಾರ್ಯಗಳನ್ನು ಮಾಡಿದ್ದರು.ಅವರ ದೂರದೃಷ್ಟಿಯ ಕಲ್ಪನೆ ಅನೇಕರಿಗೆ ಮಾದರಿಯಾಗಿತ್ತು. ಅವರ ದಾರಿಯಲ್ಲಿ ನಾವಿಂದು ನಡೆಯಬೇಕಿದೆ ಎಂದು ಹೇಳಿದರು.

ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪ್ರೊ.ತೀ.ನ.ಶಂಕರನಾರಾಯಣ, ‘ಶಿವಮೊಗ್ಗನಗರಕ್ಕೆ ಅನೇಕ ಜನ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರಲ್ಲಿ ಕೆ.ಜಿ. ಸುಬ್ರಹ್ಮಣ್ಯ ಅಗ್ರಗಣ್ಯರು. ಅವರು ಸಹೃದಯಿಗಳು, ಉತ್ತಮ ಓದುಗರೂ ಆಗಿದ್ದರು. ಸಾಹಿತ್ಯ, ಸಂಸ್ಕೃತಿ ಬಗ್ಗೆ ವಿಶೇಷ ಒಲವು ಹೊಂದಿದ್ದರು.ಇಂಗ್ಲಿಷ್ ಸಾಹಿತ್ಯದ ಜತೆಗೆ ಕನ್ನಡ ಸಾಹಿತ್ಯದ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದರು. ಅವರಿಗೆ ಯು.ಆರ್. ಅನಂತಮೂರ್ತಿ, ಕೆ.ಎಸ್.ನಿಸಾರ್ ಅಹಮ್ಮದ್, ನಾ.ಡಿಸೋಜಾ, ಗಿರೀಶ್ ಕಾಸರವಳ್ಳಿ, ಶಿವಮೊಗ್ಗ ಸು‌ಬ್ಬಣ್ಣ ಸೇರಿ ನಾಡಿನ ಅನೇಕ ಸಾಹಿತಿಗಳೊಂದಿಗೆ ಉತ್ತಮ ಸ್ನೇಹವಿತ್ತು. ನೀನಾಸಂನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರು ಛಲ ಬಿಡದ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಕಾಣುವವರೆಗೂ ವಿಶ್ರಮಿಸುತ್ತಿರಲಿಲ್ಲ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಜಿ.ಸುಬ್ರಹ್ಮಣ್ಯ ಅವರ ಪತ್ನಿ ಪಂಕಜ ಸುಬ್ರಹ್ಮಣ್ಯ, ಡಿವಿಎಸ್ ಸಂಸ್ಥೆಯ ಅಧ್ಯಕ್ಷ ಬಸಪ್ಪಗೌಡ, ಕಾರ್ಯದರ್ಶಿ ರಾಜಶೇಖರ್, ಪ್ರಮುಖರಾದ ಎಸ್.ಪಿ.ದಿನೇಶ್, ಸತೀಶ್‌ ಕುಮಾರ್ ಶೆಟ್ಟಿ, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.