ADVERTISEMENT

ಟಿಇಟಿ ಪರೀಕ್ಷೆ: ಸಿದ್ಧತೆಗೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 5:33 IST
Last Updated 3 ನವೆಂಬರ್ 2022, 5:33 IST
ಡಾ.ಸೆಲ್ವಮಣಿ
ಡಾ.ಸೆಲ್ವಮಣಿ   

ಶಿವಮೊಗ್ಗ: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನವೆಂಬರ್‌ 6 ರಂದು ಭಾನುವಾರ ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಸಂಬಂಧ ನಿಯೋಜಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ. 6ರಂದು ನಗರದ 22 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್-1 ಮತ್ತು ಮಧ್ಯಾಹ್ನ 1.30ರಿಂದ ಸಂಜೆ 4.30 ರವರೆಗೆ ಪೇಪರ್-2 ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರದ ಆವರಣದೊಳಗೆ ಅಭ್ಯರ್ಥಿಗಳ ಪ್ರವೇಶ, ಬೆಲ್ ಆಗುವ ಸಮಯ, ನಿಗದಿತ ವೇಳಾಪಟ್ಟಿಯಂತೆ ಮತ್ತು ಮಾರ್ಗಸೂಚಿ ಯನ್ವಯ ಪರೀಕ್ಷೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಇದೆಯಾ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಿಸಿ ಟಿವಿ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಒಂದು ಶಾಲೆಯ ಅಧಿಕಾರಿಗಳನ್ನು ಅದೇ ಶಾಲೆಗೆ ನಿಯೋಜಿಸದೆ, ಬೇರೆ ಶಾಲೆಗಳಿಗೆ ಮೇಲ್ವಿಚಾರಕರು, ಕೇಂದ್ರ ಅಧೀಕ್ಷಕರು, ಸಿಟ್ಟಿಂಗ್ ಸ್ಕ್ವಾಡ್ ಆಗಿ ನೇಮಿಸಬೇಕು.

ಯಾವುದೇ ರೀತಿಯ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಚ್‍ಗಳನ್ನು ಪ್ರವೇಶ ಕೇಂದ್ರಗಳೊಳಗೆ ನಿರ್ಬಂಧಿಸಬೇಕು. ಸೂಕ್ತವಾದ ಆಸನ ವ್ಯವಸ್ಥೆ, ಅಂಗವಿಕಲರಿಗೆ ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಪೂರ್ವಭಾವಿಯಾಗಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿ ಗಳು ತೆರಳಿ, ಆಸನ ವ್ಯವಸ್ಥೆ, ಸಿಸಿ ಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಪರೀಕ್ಷೆ ಶಾಂತಿಯುತವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಮಾರ್ಗಾಧಿಕಾರಿಗಳು ಪಡೆದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಸರಬರಾಜು ಮಾಡಲು ಪ್ರತಿ ಮಾರ್ಗಕ್ಕೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕೆಂದು ಪೊಲೀಸ್ ಇಲಾಖೆಗೆ ತಿಳಿಸಿದರು.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಪರೀಕ್ಷೆಗೆ ಸಂಬಂಧಿಸಿದಂತೆ ಮೇಲ್ವಿಚಾರಕರು, ಕೇಂದ್ರ ಅಧೀಕ್ಷಕರು, ಸಿಟ್ಟಿಂಗ್ ಸ್ಕ್ಯಾಡ್, ಮಾರ್ಗಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿ,ಸಿಬ್ಬಂದಿಗಳು ಅನುಸರಿಸಬೇಕಾದ ಮಾರ್ಗಸೂಚಿ ಗಳನ್ನು ವಿವರಿಸಿ ಹೇಳಿದರು.

ಸಭೆಯಲ್ಲಿ ಡಯಟ್ ಪ್ರಾಂಶುಪಾಲ ರಾದ ಬಸವರಾಜಪ್ಪ, ಬಿಇಒ ನಾಗರಾಜ್, ಜಿಲ್ಲಾ ಖಜಾನಾಧಿಕಾರಿ ಎಸ್.ಎಚ್.ಸಾವಿತ್ರಿ ಹಾಜರಿದ್ದರು.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ
ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸೆಕ್ಷನ್ 144 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ ವರೆಗೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಆದೇಶಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪರೀಕ್ಷೆ
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ನಗದು ಗುಮಾಸ್ತರು/ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನವೆಂಬರ್‌ 12 ಹಾಗೂ 13ರಂದು ನಡೆಸಲಾಗುತ್ತಿದೆ. ಈಗಾಗಲೇ ಪ್ರವೇಶ ಪತ್ರ ಕಳುಹಿಸಲಾಗಿದೆ.

ಪ್ರವೇಶ ಪತ್ರ ತಲುಪದಿದ್ದ ಅಭ್ಯರ್ಥಿಗಳು ಅರ್ಜಿಯ ಸ್ವೀಕೃತಿ ಪತ್ರ, ಕೋರಿಕೆ ಪತ್ರ, ಮೂಲ ಆಧಾರ ಕಾರ್ಡ್ ಹಾಗೂ ಜೆರಾಕ್ಸ್ ಪ್ರತಿ, 2 ಭಾವಚಿತ್ರದೊಂದಿಗೆ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನವೆಂಬರ್‌ 10ರಂದು ಸಂಪರ್ಕಿಸಿದ್ದಲ್ಲಿ ಡ್ಯೂಪ್ಲಿಕೇಟ್ ಪ್ರವೇಶ ಪತ್ರ ನೀಡಲಾಗುತ್ತಿದೆ.

ಹಾಗೂ ಅರ್ಜಿ ತಿರಸ್ಕೃತಗೊಂಡ ಎಲ್ಲಾ ಹುದ್ದೆಗಳ ಅರ್ಜಿದಾರರ ವಿವರವನ್ನು ಬ್ಯಾಂಕಿನ ಪ್ರಧಾನ ಕಚೇರಿಯ ನೋಟಿಸ್ ಬೋರ್ಡ್‍ನಲ್ಲಿ ಹಾಗೂ ಬ್ಯಾಂಕಿನ ವೆಬ್‍ಸೈಟ್ www.shimogadccbank.com ರಲ್ಲಿ ಪ್ರಕಟಿಸಲಾಗಿದೆ ಎಂದು ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಚಾಲಕರ ಹುದ್ದೆಗೆ ನವೆಂಬರ್‌ 12ರಂದು ಮಧ್ಯಾಹ್ನ 2 ರಿಂದ 3.30 ರವರೆಗೆ ಬಾಲರಾಜ್ ಅರಸ್ ರಸ್ತೆಯ ಆಚಾರ್ಯ ತುಳಸಿ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ಹಾಗೂ ಅಟೆಂಡರ್ ಹುದ್ದೆಗಾಗಿ ನವೆಂಬರ್‌ 13 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಕಿರಿಯ ಸಹಾಯಕರು/ ನಗದು ಗುಮಾಸ್ತರು/ ಕ್ಷೇತ್ರಾಧಿಕಾರಿಗಳ ಹುದ್ದೆಗೆ ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣ, ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜು, ಕಸ್ತೂರಬಾ ಪ್ರೌಢಶಾಲೆ ಆವರಣ ಹಾಗೂ ಡಿ.ವಿ.ಎಸ್. ಕಾಲೇಜು ಆವರಣದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.