ADVERTISEMENT

ಬಡವರ ಉನ್ನತಿಗೆ ಶ್ರಮಿಸಿದ ಕಾಂಗ್ರೆಸ್

ಸೋನಿಯಾ ಗಾಂಧಿ ಜನ್ಮದಿನ ಪ್ರಯುಕ್ತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಶಿವಮೊಗ್ಗದ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಭಾನುವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕೇಕ್‌ ಕಟ್ ಮಾಡುವ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 73ನೇ ಜನ್ಮದಿನ ಆಚರಿಸಿದರು.
ಶಿವಮೊಗ್ಗದ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಭಾನುವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕೇಕ್‌ ಕಟ್ ಮಾಡುವ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 73ನೇ ಜನ್ಮದಿನ ಆಚರಿಸಿದರು.   

ಶಿವಮೊಗ್ಗ: ವೈವಿಧ್ಯ ಜಾತಿ, ಭಾಷೆ, ಧರ್ಮ, ಸಂಸ್ಕೃತಿಗಳಿಂದ ಕೂಡಿರುವ ಭಾರತ ದೇಶದಲ್ಲಿ ಎಲ್ಲರನ್ನು ಒಟ್ಟುಗೂಡಿಸಿ ಸಾಮಾಜಿಕ ಸಮಾನತೆ ಹಾಗೂ ಬಡ ವರ್ಗದ ಉನ್ನತಿಗೆ ಕಾಂಗ್ರೆಸ್ ಶ್ರಮಿಸಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಭಾನುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 73ನೇ ಜನ್ಮದಿನ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್‍ನಿಂದ ಆಯೋಜಿಸಿದ್ದ ‘ಸಾರ್ವಜನಿಕರಿಗೆ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ’ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದಸಂಸ್ಕೃತಿ ಹಾಗೂ ಆಲೋಚನೆಗಳನ್ನು ಸಮಾಜದಲ್ಲಿ ಗಟ್ಟಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿಎಲ್ಲ ವರ್ಗದ ಜನರನ್ನು ತಲುಪಬೇಕಿದೆ ಎಂದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ‘ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ನಂತರದ ಆಡಳಿತ ಅವಧಿಗಳಲ್ಲಿ ಬಡಜನರಿಗೆ ಉಪಯುಕ್ತ ಯೋಜನೆಗಳ ಅನುಷ್ಠಾನ ಮಾಡುವ ಮೂಲಕ ಸಾಮಾಜಿಕ ನ್ಯಾಯದಡಿ ಕೆಲಸ ಮಾಡಿದೆ’ ಎಂದರು.

ಆರೋಗ್ಯ ತಪಾಸಣೆಗೆ ಬರುವ ಪ್ರತಿಯೊಬ್ಬರಿಗೂ ಒಂದೇ ಸೂರಿನಡಿ ಎಲ್ಲ ವೈದ್ಯಕೀಯ ತಪಾಸಣೆ ಸೌಲಭ್ಯ ಒದಗಿಸಲು ಎಲ್ಲ ವಿಭಾಗಗಳ ವೈದ್ಯರನ್ನು ಕರೆಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ‘ದೇಶದ ಜನತೆಗೆ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿ ಕಾಂಗ್ರೆಸ್‍ನ ರಾಷ್ಟ್ರ ನಾಯಕರ ಕೊಡುಗೆಯ ಅರಿವು ಮೂಡಿಸುವಲ್ಲಿ ಪಕ್ಷ ವಿಫಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನೆಹರೂ, ಇಂದಿರಾ ಗಾಂಧಿ ಅವರು ದೇಶದ ಪ್ರಗತಿಗೆ ಶ್ರಮಿಸಿದ ಬಗ್ಗೆ ಕಾರ್ಯಕರ್ತರಲ್ಲಿ ಸರಿಯಾದ ಮಾಹಿತಿಯಿಲ್ಲ. ಮಾಹಿತಿ ಕೊರತೆಯಿಂದ ಸ್ವಾತಂತ್ರ್ಯನಂತರ ಹುಟ್ಟಿದ ವ್ಯಕ್ತಿಗಳೆಲ್ಲಾ ನೆಹರೂ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ದೇಶದ ಒಳಿತಿಗೆ ಜೀವನ ಸಮರ್ಪಿಸಿದ ನೆಹರೂ ಬಗ್ಗೆ ಹಗುರವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಶಿಬಿರದಲ್ಲಿ ನಾರಾಯಣ ಹೃದಯಾಲಯ ಬೆಂಗಳೂರು, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಶರಾವತಿ ದಂತ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.

ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ್‍ಕುಮಾರ್, ಪ್ರಮುಖರಾದಶಾಂತವೀರಪ್ಪಗೌಡ, ಕೆ.ಬಿ. ಪ್ರಸನ್ನಕುಮಾರ್, ಎಸ್.ಪಿ. ಶೇಷಾದ್ರಿ, ತೀ.ನ. ಶ್ರೀನಿವಾಸ್, ಸಿ.ಎಸ್. ಚಂದ್ರಭೂಪಾಲ್, ಇಸ್ಮಾಯಿಲ್ ಖಾನ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ವಿಶ್ವನಾಥ ಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.