ADVERTISEMENT

ಶಿವಮೊಗ್ಗ | ‘ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಜಾಗೃತ ಮನಸ್ಥಿತಿಯ ಸಂಕೇತ’

ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:54 IST
Last Updated 26 ಜೂನ್ 2022, 5:54 IST
ಸಾಗರದಲ್ಲಿ ಶನಿವಾರ ನಡೆದ ‘ತುರ್ತು ಪರಿಸ್ಥಿತಿ-–1975 ಅವಲೋಕನ’ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ಸನ್ಮಾನಿಸಲಾಯಿತು.
ಸಾಗರದಲ್ಲಿ ಶನಿವಾರ ನಡೆದ ‘ತುರ್ತು ಪರಿಸ್ಥಿತಿ-–1975 ಅವಲೋಕನ’ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ಸನ್ಮಾನಿಸಲಾಯಿತು.   

ಸಾಗರ: ದೇಶದಲ್ಲಿನ ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟ ಪ್ರಜಾಪ್ರಭುತ್ವದಲ್ಲಿನ ಜಾಗೃತ ಮನಸ್ಥಿತಿಯ ಸಂಕೇತ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.

ಇಲ್ಲಿನ ಬಾಪಟ್ ಸಮುದಾಯ ಭವನದಲ್ಲಿ ಸೀತಾಬಾಯಿ ರಾಮರಾವ್ ಬಾಪಟ್ ಚಾರಿಟಬಲ್ ಟ್ರಸ್ಟ್, ಸೇವಾ ಸಾಗರ, ಜೋಷಿ ಫೌಂಡೇಷನ್, ಮಾತೃಭೂಮಿ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ-1975 ಅವಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರುಮಾತನಾಡಿದರು.

ಇಂದಿರಾಗಾಂಧಿ ಅವರು ದೇಶದ ಜನರ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಲ್ಲಿ ಈಗ ದೈಹಿಕ ಶಕ್ತಿ ಕುಂದಿರಬಹುದು. ಆದರೆ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂಬ ಮಾನಸಿಕ ಸ್ಥೈರ್ಯ ಇನ್ನೂ ಉಳಿದಿದೆ. ಇಂತಹ ಮನಸ್ಥಿತಿಯಿಂದಲೇಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜೆಗಳ ಸ್ವಾತಂತ್ರ್ಯಕ್ಕೆ ಮಿತಿ ಹೇರುವ ಕೃತ್ಯ ನಡೆದದ್ದನ್ನು ಇತಿಹಾಸ ಯಾವತ್ತೂ ಕ್ಷಮಿಸುವುದಿಲ್ಲ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮವಿದ್ದಂತೆ. ಈ ಹೋರಾಟದಲ್ಲಿ ಪಾಲ್ಗೊಂಡವರ ತ್ಯಾಗವನ್ನು ಇಂದಿನ ತಲೆಮಾರಿಗೆ ತಿಳಿಸುವ ಕೆಲಸವಾಗಬೇಕಿದೆ’ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಇಂದಿರಾ ಗಾಂಧಿ ಅವರು ನಂತರ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲಬೇಕಾಯಿತು. ಈ ಮೂಲಕ ದೇಶದ ಜನರು ಸರ್ವಾಧಿಕಾರ ಸಹಿಸುವುದಿಲ್ಲ ಎಂಬ ಸಂದೇಶವನ್ನು ಕೊಟ್ಟಿದ್ದಾರೆ ಎಂದುವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ಹೇಳಿದರು.

ಸಂಘ ಪರಿವಾರದ ಅ.ಪು.ನಾರಾಯಣಪ್ಪ ಆಶಯ ಭಾಷಣ ಮಾಡಿದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿನಂದನಾ ಭಾಷಣ ಮಾಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಪ್ರಮುಖರಾದ ಡಿ.ಕೆ.ಸದಾಶಿವ, ಬಿ.ಎಚ್.ರಾಘವೇಂದ್ರ, ಅಬಸೆ ದಿನೇಶ್ ಕುಮಾರ್ ಜೋಷಿ ಇದ್ದರು.

ಜಯಾ ಆರ್. ಪೈ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಾಜೇಂದ್ರ ಪೈ ಸ್ವಾಗತಿಸಿದರು. ಮ.ಸ. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಮೂರ್ತಿ ಕಾನುಗೋಡು ವಂದಿಸಿದರು. ಕೆ.ಆರ್.ಗಣೇಶ್ ಪ್ರಸಾದ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.