ADVERTISEMENT

ನಗರದಲ್ಲಿ ಬಿಗಡಾಯಿಸಿದ ಕಸದ ಸಮಸ್ಯೆ

ಮೂರನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 4:35 IST
Last Updated 4 ಜುಲೈ 2022, 4:35 IST
ಶಿವಮೊಗ್ಗ ಕೆ.ಆರ್ ಪುರಂ ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದ ರಾಸಿ
ಶಿವಮೊಗ್ಗ ಕೆ.ಆರ್ ಪುರಂ ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದ ರಾಸಿ   

ಶಿವಮೊಗ್ಗ: ಹಲವು ವರ್ಷ ಸೇವೆ ಸಲ್ಲಿಸಿದರೂ ಸೇವೆಗೆ ಯಾವ ಭದ್ರತೆಯೂ ಇಲ್ಲ. ಇನ್ನಾದರೂ ಸೇವೆಗೆ ಭದ್ರತೆ ಕೊಡಿ, ತಮ್ಮ ಸೇವೆಯನ್ನು ಖಾಯಂಗೊಳಿಸಿ ಎಂದು ಆಗ್ರಹಿಸಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಮಹಾನಗರ ಪಾಲಿಕೆ ನೇರಪಾವತಿ ನೌಕರರ ಪ್ರತಿಭಟನೆ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕಾಯಂ ನೌಕರರು ಹೊರತುಪಡಿಸಿ, ಮಿಕ್ಕೆಲ್ಲ ಕಾರ್ಮಿಕರು ಕಸ ವಿಲೇವಾರಿ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ನಗರದಲ್ಲಿ ಕಸದ ಸಮಸ್ಯೆ ಬಿಗಡಾಯಿಸಿದೆ. ಎಲ್ಲ ಇದ್ದರೂ ಸರಿಯಾಗಿ ಕಸ ವಿಲೇವಾರಿಯಾಗಲ್ಲ ಎಂಬ ಆರೋಪ ಇದ್ದೇ ಇದೆ. ಈ ನಡುವೆ ನೇರ ಪಾವತಿ ಕಾರ್ಮಿಕರು ಮುಷ್ಕರ ಹೂಡಿರುವುದು ಪಾಲಿಕೆ ಅಧಿಕಾರಿಗಳಿಗೂ ತಲೆ ನೋವು ತಂದಿದೆ.

ನಗರದ ಗಾಂಧಿ ಬಜಾರ್‌ ಸಮೀಪದ ಕಸ್ತೂರಿ ಬಾ ರಸ್ತೆ ಹಾಗೂ ಹಳೇ ಹೂವಿನ ಮಾರುಕಟ್ಟೆ ರಸ್ತೆಯ ಹತ್ತಿರ ಕಸದ ರಾಶಿ ಬಿದ್ದಿದ್ದು, ಕೇವಲ ಎರಡೇ ದಿನಕ್ಕೆ ಜನಸಾಮಾನ್ಯರಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಮುಷ್ಕರ ಹೀಗೆ ಮುಂದುವರಿದರೆ ನಗರದ ರಸ್ತೆಯ ಪಕ್ಕದಲ್ಲಿ ಕಸದ ರಾಶೀಯೇ ಸೃಷ್ಟಿಯಾಗಲಿದೆ.

ADVERTISEMENT

ಮುಷ್ಕರ ಪ್ರಾರಂಭವಾದ ದಿನದಿಂದಲೂ ನಗರ ಪ್ರದೇಶಗಳಲ್ಲಿ ಸೂಕ್ತ ರೀತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಪ್ರತಿ ದಿನ ಬೆಳಿಗ್ಗೆಯೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಿದ್ದ ಪೌರಕಾರ್ಮಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಕೈಗೊಂಡಿರುವ ಪರಿಣಾಮ ಪ್ರಮುಖ ರಸ್ತೆ ಮತ್ತು ಸ್ಥಳಗಳಲ್ಲಿ ಕಸ ಸಂಗ್ರಹವಾಗುತ್ತಿಲ್ಲ.

ಮನೆಯಲ್ಲಿನ ಕಸ ರಸ್ತೆ–ಕಾಲುವೆಗೆ: ನಗರದ ನಾಗರಿಕರು ತಮ್ಮ ಮನೆಯ ಕಸವನ್ನು ರಸ್ತೆಯ ಪಕ್ಕದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕಸ ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆ ಸ್ಥಗಿತದಿಂದಾಗಿ ರಸ್ತೆಯಲ್ಲಿ ಕಸದ ರಾಶಿ ಹೆಚ್ಚುತ್ತಿದೆ.

ಬೀದಿ ಬದಿ ಅಂಗಡಿಗಳ ಹಾಗೂ ಹೂ ಹಣ್ಣು ತರಕಾರಿ ಮಂಡಿಗಳಲ್ಲಿನ ಕಸದ ರಾಶಿಯೂ ರಸ್ತೆ ಸೇರುತ್ತಿವೆ.

ಅಲ್ಪ ಪ್ರಮಾಣದಲ್ಲಿರುವ ಕಾಯಂ ಪೌರ ಕಾರ್ಮಿಕರು ನಗರದ ಸ್ವಚ್ಛತಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಎಲ್ಲ ಕಡೆಗಳಲ್ಲಿ ಕಸ
ವಿಲೇವಾರಿ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಪೌರ ಕಾರ್ಮಿಕರ ಮುಷ್ಕರ
ಹೀಗೆ ಮುಂದುವರಿದರೆ ನಗರದಲ್ಲಿ ಕಸದ ಸಮಸ್ಯೆ ಗಂಭೀರವಾಗಿ ಪರಿಣಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.