ADVERTISEMENT

ಅಡಿಕೆ ವಿರುದ್ಧದ ಲಾಬಿ ಎದುರಿಸುವ ಶಕ್ತಿ ಸರ್ಕಾರಕ್ಕಿದೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 13:49 IST
Last Updated 28 ನವೆಂಬರ್ 2019, 13:49 IST
ಸಾಗರದಲ್ಲಿ ತೋಟಗಾರ್ಸ್ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಹಾಗೂ ಶಾಸಕ ಎಚ್.ಹಾಲಪ್ಪ ಹರತಾಳು ಅವರನ್ನು ಅಭಿನಂದಿಸಲಾಯಿತು.
ಸಾಗರದಲ್ಲಿ ತೋಟಗಾರ್ಸ್ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಹಾಗೂ ಶಾಸಕ ಎಚ್.ಹಾಲಪ್ಪ ಹರತಾಳು ಅವರನ್ನು ಅಭಿನಂದಿಸಲಾಯಿತು.   

ಸಾಗರ: ಕೆಲವು ವರ್ಷಗಳಿಂದ ಅಡಿಕೆ ಬೆಳೆ ವಿರುದ್ಧ ಕೆಲವು ಲಾಬಿ ಕೆಲಸ ಮಾಡುತ್ತಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇದೆ ಎಂದು ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ
ಹೇಳಿದರು.

ಇಲ್ಲಿನ ತೋಟಗಾರ್ಸ್ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕರವಲ್ಲದೆ ಇದ್ದರೂ ಅದಕ್ಕೆ ಆ ರೀತಿ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆದಿದೆ’ ಎಂದು ದೂರಿದರು.

ಅಡಿಕೆಯಲ್ಲಿ ಔಷಧೀಯ ಗುಣವಿದೆ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ಇರುವ ಪ್ರಕರಣದಲ್ಲಿ ಈ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ಧವಾಗಿವೆ ಎಂದು ಹೇಳಿದರು.

ADVERTISEMENT

ಅಡಿಕೆ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಪರ ಇದೆ ಎಂಬುದನ್ನು ಸಾಬೀತುಪಡಿಸಿದೆ. ಅಡಿಕೆ ಬೆಳೆಗಾರರ ಹಿತಕ್ಕೆ ಪೂರಕವಾದ ಕಾಯ್ದೆ ರೂಪಿಸಲು, ಯೋಜನೆಗಳನ್ನು ಜಾರಿಗೊಳಿಸಲು ಈ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದುಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿದ ಶಾಸಕ ಎಚ್.ಹಾಲಪ್ಪ ಹರತಾಳು, ‘ಕೊಳೆರೋಗದಿಂದ ಬೆಳೆನಷ್ಟ ಅನುಭವಿಸಿರುವವರಿಗೆ ಪರಿಹಾರ ವಿತರಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಚರ್ಚೆ ನಡೆದಿದೆ. ಉಪ ಚುನಾವಣೆ ನಂತರ ಈ ಕೆಲಸ ಆಗಲಿದೆ’ ಎಂದು ಹೇಳಿದರು.

ತೋಟಗಾರ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಸಿ.ದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಹಕಾರಿ ಮುಖಂಡ ಎಂ.ಹರನಾಥ ರಾವ್, ವಿ.ಸಿ.ಪ್ರಕಾಶ್, ಟಿ.ಡಿ.ಮೇಘರಾಜ್ ಇದ್ದರು.

ಸಾವಿತ್ರಿ ಭಾಸ್ಕರರಾವ್ ಪ್ರಾರ್ಥಿಸಿದರು. ಹು.ಭಾ.ಅಶೋಕ್ ಸ್ವಾಗತಿಸಿದರು. ಎಚ್.ಟಿ.ಜಯಶೀಲಪ್ಪ ಗೌಡ ವಂದಿಸಿದರು. ಮಹಾಬಲೇಶ್ವರ ಅರೆಹದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.