ADVERTISEMENT

ಸಹಕಾರ ಸಂಸ್ಥೆ ಪ್ರಗತಿಯಲ್ಲಿ ನೌಕರರ ಪಾತ್ರ ಅಪಾರ

ತರಬೇತಿ ಶಿಬಿರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 4:26 IST
Last Updated 4 ಜನವರಿ 2022, 4:26 IST
ಶಿವಮೊಗ್ಗ ತಾಲ್ಲೂಕು ಗಾಜನೂರು ಸಮೀಪದ ತುಂತುರು ಫಾರಂನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ಶಿವಮೊಗ್ಗ ತಾಲ್ಲೂಕು ಗಾಜನೂರು ಸಮೀಪದ ತುಂತುರು ಫಾರಂನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಬೇತಿ ಶಿಬಿರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.   

ಶಿವಮೊಗ್ಗ: ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ನೌಕರರ ಶ್ರಮ ದೊಡ್ಡದು. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಜತೆಗೆ ತಾವೂ ಬದುಕಬೇಕು ಎಂಬ ತತ್ವವನ್ನು ಅನುಷ್ಠಾನಗೊಳಿಸಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗಾಜನೂರು ಸಮೀಪದ ತುಂತುರು ಫಾರಂನಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ, ಶಿವಮೊಗ್ಗ ಮತ್ತು ಜಿಲ್ಲೆಯ ಮಾರಾಟ ಸಹಕಾರ ಸಂಘಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಜ್ಯಮಟ್ಟದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪರಸ್ಪರ ನಂಬಿಕೆ, ನೌಕರರ ನಡುವಿನ ವೃತ್ತಿ ಸಂಬಂಧದಿಂದ ಸಹಕಾರ ಸಂಘಗಳು ಕಟ್ಟಿಗೊಳ್ಳಬೇಕಿದೆ. ಸಂಘ ಅಥವಾ ಸಂಸ್ಥೆಗಳಲ್ಲಿ ಯಾರಾದರೊಬ್ಬರು ಕೆಟ್ಟ ಮನಃಸ್ಥಿತಿ ಹೊಂದಿದ್ದರೂ ಇಡೀ ವ್ಯವಸ್ಥೆಯೇ ಹಾಳಾಗುತ್ತದೆ ಎಂದು ಸಲಹೆ ನೀಡಿದರು.

ADVERTISEMENT

‘ಈ ಹಿಂದೆ ಸಹಕಾರ ಸಂಸ್ಥೆಗಳು ಇರುವುದೇ ಮೇಯುವುದಕ್ಕೆ ಎಂಬ ಆಲೋಚನೆ ಕೆಲವರಲ್ಲಿತ್ತು. ಅದೇ ಕೆಲವರು ಸಂಸ್ಥೆಯ ಹಣವನ್ನು ಮೇಯ್ದರು. ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಿದವರಿಗೆ ಒಂದು ರೀತಿಯ ಗೌರವ ಸಿಗುತ್ತಿತ್ತು. ಆದರೆ ಇಂದು ಕಾಲ, ಪರಿಸ್ಥಿತಿ ಬದಲಾಗಿದೆ. ಬೆರಳೆಣಿಕೆಯಷ್ಟು ಸಹಕಾರ ಸಂಘಗಳನ್ನು ಬಿಟ್ಟರೆ ಬಹಳಷ್ಟು ಸಂಘಗಳು ಆರ್ಥಿಕವಾಗಿ ಸದೃಢವಾಗುತ್ತಿವೆ. ಇದು ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಾಧ್ಯವಾಗಿದೆ’ ಎಂದು ಹೇಳಿದರು.

ರಾಜ್ಯ ಸಹಕಾರ ತೋಟಗಾರಿಕಾ ಮಹಾ ಮಂಡಳ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ಮಾತನಾಡಿ, ‘ಎಲ್ಲ ರಂಗಗಳಲ್ಲೂ ಸಹಕಾರ ಕ್ಷೇತ್ರ ಕಾಲಿಟ್ಟಿದೆ. 100 ವರ್ಷದ ಇತಿಹಾಸವಿರುವ ಸಹಕಾರ ಕ್ಷೇತ್ರ ಸನ್ಮಾರ್ಗದಲ್ಲಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದ್ದು, ಪಾಲನೆ ಮಾಡಬೇಕಿದೆ. ಒಂದು ದಿನದ ತರಬೇತಿ ಶಿಬಿರ ಅಧಿಕಾರಿಗಳು ಮತ್ತು ನೌಕರರಿಗೆ ಸಹಕಾರಿ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಟಿ.ಎಸ್.ದುಗ್ಗೇಶ್ ಮಾತನಾಡಿದರು.

ಕೃಷಿ ಮಾರಾಟ ಸಹಕಾರ ಸಂಘಗಳಿಗೆ ಅನ್ವಯಿಸುವ ಆದಾಯ ತೆರಿಗೆ ಮತ್ತು ಸರಕು ಸೇವಾ ತೆರಿಗೆ ಕುರಿತು ಬೆಂಗಳೂರಿನ ಲೆಕ್ಕಪರಿಶೋಧಕ ಅನಿಲ್ ಭಾರದ್ವಾಜ್ ಮತ್ತು ಕೌಶಲಾಭಿವೃದ್ಧಿ ಮತ್ತು ಒತ್ತಡ ನಿರ್ವಹಣೆ ಕುರಿತು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ನಿವೃತ್ತ ಕುಲಸಚಿವ ಡಾ. ಎಸ್.ವಿಘ್ನೇಶ್ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ರಾಜ್ಯ ಸಹಕಾರಿ ಮಹಾಮಂಡಳದ ವೃತ್ತಿಪರ ನಿರ್ದೇಶಕಿ ಕೆ.ಸಿ.ನಾಗರತ್ನ, ಜಿಲ್ಲಾ ಸಂಘದ ಉಪಾಧ್ಯಕ್ಷ ಎಂ.ಮಂಜಪ್ಪ, ನಿರ್ದೇಶಕರಾದ ಕೆ.ಎಲ್.ಜಗದೀಶ್ವರ್, ಎಚ್.ಎಸ್.ಸಂಜೀವ್‍ಕುಮಾರ್, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕ ಆರ್.ರಾಘವೇಂದ್ರ, ರಾಜು ಪಾಟೀಲ್, ನಾಗರಾಜ ಶೆಟ್ಟಿ, ಸಿ.ಬಿ.ಈಶ್ವರ್, ಜಯರಾಮ್ ಗೋಂದಿ, ಮಮತಾ, ಬಿ.ಎಚ್.ಶಶಿರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.