ಭದ್ರಾವತಿ: ‘ವಚನ ಚಳವಳಿ ಐತಿಹಾಸಿಕ ಹಿನ್ನೆಲೆಗೆ ಸೀಮಿತವಲ್ಲ. ವಾಸ್ತವ ಬದುಕಿಗೂ ಸಾಮೀಪ್ಯ ಹೊಂದಿದೆ’ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಉಪನ್ಯಾಸಕಿ ಪ್ರೊ.ಶುಭಾ ಮರವಂತೆ ಹೇಳಿದರು.
ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ಶುಕ್ರವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಬದುಕಿನ ವಾಸ್ತವ ತೆರೆದಿಡುವ ವಚನಕಾರರ ಚಿಂತನೆಗೆ ಕಳಶವಿಟ್ಟ ರೀತಿಯಲ್ಲಿ ಅಕ್ಕಮಹಾದೇವಿ ಬದುಕು ಸಹ ಅಧ್ಯಾತ್ಮ ಚಿಂತನೆಯ ತಳಹದಿಯ ಮೇಲೆ ನಿಂತಿದೆ’ ಎಂದರು.
‘ಅಂದಿನ ಸಾಂಸಾರಿಕ ಬದುಕಿನ ಬವಣೆಗಳ ಚಿತ್ರಣವನ್ನು ನಾವು ವಿಮುಕ್ತಿ ಮನೋಭಾವದಿಂದ ಕಾಣದೆ ಅದನ್ನು ನಮ್ಮೊಳಗಿನ ಅಂತರ್ಮುಖಿ ಚಿಂತನೆಯಾಗಿ ಬೆಳೆಸಿಕೊಳ್ಳಬೇಕು.ಅಂದಿನ ಸಾಮಾಜಿಕ ವಾತಾವರಣದ ಪರಿಸ್ಥಿತಿಯಲ್ಲೂ ಅಕ್ಕಮಹಾದೇವಿ ಕೇಶಾಧಾರವನ್ನೇ ತನ್ನ ಆಭರಣ ಮಾಡಿಕೊಂಡು 650 ಕಿ.ಮೀ. ಸಂಚರಿಸಿದ್ದು ದೊಡ್ಡ ಸಾಹಸವೇ ಸರಿ. ಆ ಮೂಲಕ ವೈಚಾರಿಕ ಕ್ರಾಂತಿಯ ವಾಸ್ತವ ಚಿತ್ರಣ ತೆರೆದಿಟ್ಟಅಕ್ಕನ ಚಿಂತನೆ ಇಂದಿಗೂ ಪ್ರಸ್ತುತ’ ಎಂದು ಹೇಳಿದರು.
ಮುಖ್ಯ ಅತಿಥಿ ಬಿ.ಎಸ್.ರೂಪಾರಾವ್, ‘ಅಕ್ಕನ ಚಿಂತನೆಗಳು ಅಂದಿನ ಮಹಿಳಾ ಸ್ಥಿತಿಗತಿಗಳ ಅವಲೋಕನ ತಿಳಿಸುವ ಜತೆಗೆ ಭವಿಷ್ಯದಲ್ಲಿ ಇದನ್ನು ಅಳವಡಿಸಿಕೊಂಡು ಬದುಕು ನಡೆಸುವ ವಾಸ್ತವ ಸಾರಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆರ್.ಎಸ್. ಶೋಭಾ ಮಾತನಾಡಿ, ‘ಅಕ್ಕನ ವಚನಗಳ ಸಾರವನ್ನು ಅರಿತು ಬಾಳ್ವೆ ನಡೆಸುವ ಮನಃಸ್ಥಿತಿ ಎಲ್ಲರಲ್ಲೂ ಬೆಳೆಯಬೇಕು’ಎಂದರು.
ಗೌರಮ್ಮ ಶಂಕ್ರಯ್ಯ, ಸುಶೀಲಾ ಸದಾಶಿವಪ್ಪ, ಮಮತಪ್ರಕಾಶ್ ಇದ್ದರು. ಯಶೋದ, ನಾಗರತ್ನ, ಗೌರಮ್ಮ ಪ್ರಾರ್ಥಿಸಿದರು, ಕುಸುಮಾ ತೀರ್ಥಯ್ಯ ನಿರೂಪಿಸಿದರು. ಮಧುಮಿತ ಪರಮೇಶ್ವರಪ್ಪ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.