ADVERTISEMENT

ವೃದ್ಧಾಶ್ರಮ ಮನೋಭಾವದ ಹಳೆ ಶಿಕ್ಷಣಕ್ಕೆ ತಿಲಾಂಜಲಿ; ಡಾ.ಎಲ್. ಸವಿತಾ

ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಮೈಸೂರಿನ ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:13 IST
Last Updated 23 ಸೆಪ್ಟೆಂಬರ್ 2021, 3:13 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ ಮಾತನಾಡಿದರು. ಸಂಸದ ಬಿ.ವೈ. ರಾಘವೇಂದ್ರ, ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್‌ ಅಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ಅನಿಲ್ ಪಿ. ಶೆಟ್ಟಿ ಇದ್ದರು.
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ ಮಾತನಾಡಿದರು. ಸಂಸದ ಬಿ.ವೈ. ರಾಘವೇಂದ್ರ, ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್‌ ಅಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ಅನಿಲ್ ಪಿ. ಶೆಟ್ಟಿ ಇದ್ದರು.   

ಶಿವಮೊಗ್ಗ: ಪ್ರಸ್ತುತ ಇರುವ ಶಿಕ್ಷಣ ಸಾಕಿ ಸಲುಹಿದ ಹಿರಿಯರನ್ನೇ ವೃದ್ಧಾಶ್ರಮಕ್ಕೆ ಕಳುಹಿಸುವ ಮನಃಸ್ಥಿತಿ ಬೆಳೆಸುತ್ತಿದೆ. ಪಠ್ಯಕ್ರಮದ ದೋಷವೇ ಇದಕ್ಕೆ ಕಾರಣ. ಹೊಸ ಶಿಕ್ಷಣ ನೀತಿ ಇಂತಹ ಎಲ್ಲ ನ್ಯೂನತೆ ಸರಿಪಡಿಸಲಿದೆ ಎಂದು ಮೈಸೂರಿನ ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್‌ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಭವ್ಯ ಭಾರತ ನಿರ್ಮಾಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ -2020’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಸ್ತುತ 3 ವರ್ಷದಿಂದ 21 ವರ್ಷದವರೆಗೆ ಮಕ್ಕಳನ್ನು ಶಾಲೆಯ ಕೊಠಡಿಯಲ್ಲೇ ಬಂಧಿಗಳಾಗಿಸಲಾಗುತ್ತಿದೆ. ಪಠ್ಯಕ್ರಮ ಹೊರತು ಕೌಶಲ ಕಲಿಸುತ್ತಿಲ್ಲ. ಶಿಕ್ಷಣದ ಜತೆ ಬದುಕುವ ಕೌಶಲ, ಜೀವನಕ್ಕೆ ಬೇಕಾದ ಜ್ಞಾನ ತಿಳಿಸಿಕೊಡುವ ಕಾರ್ಯ ಹೊಸ ಶಿಕ್ಷಣ ನೀತಿ ಒಳಗೊಂಡಿದೆ. ಈ ನೀತಿ ವಿದ್ಯಾರ್ಥಿಗಳ ಭವಿಷ್ಯದ ಕೀಲಿಕೈ ಎಂದು ಹೇಳಿದರು.

ADVERTISEMENT

‘ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಪ್ರತಿಯೊಂದು ಕ್ಷೇತ್ರವೂ ಬದಲಾವಣೆಯಾಗುತ್ತಿದೆ. ಶಿಕ್ಷಣ ಕ್ಷೇತ್ರ ನಿಂತ ನೀರಾಗಿದೆ.
ಬ್ರಿಟಿಷರ ಕಾಲದ ಶಿಕ್ಷಣಕ್ಕೆ ಅಂಟಿಕೊಂಡಿದ್ದೇವೆ. ಮೌಲ್ಯಾಧಾರಿತ, ಕೌಶಲಪೂರ್ಣ ಶಿಕ್ಷಣ ಲಭಿಸುತ್ತಿಲ್ಲ. ಎಂಜಿನಿಯರಿಂಗ್ ಕಲಿತ ವಿದ್ಯಾರ್ಥಿಗೆ ಮನೆಯ ಒಂದು ಚಿಕ್ಕ ನಲ್ಲಿ ದುರಸ್ತಿ ಮಾಡಲು ಬರುವುದಿಲ್ಲ. ಆ ಕೌಶಲ ಆತನ ಬಳಿ ಇಲ್ಲ’ ಎಂದು
ವಿಷಾದಿಸಿದರು.

ಪ್ರತಿ ಮಗುವೂ ಕ್ರಿಯಾಶೀಲವಾಗಿ ಯೋಚಿಸುವುದನ್ನು ಕಲಿಸಬೇಕು. ಮಗುವಿಗೆ ಆಸಕ್ತಿ ಇರುವ ವಿಷಯದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು. ಮಗುವಿನ ಕಲಿಕೆಗೆ ತಡೆಗೋಡೆ ಇರಬಾರದು. ಹಿರಿಯರಿಗೆ ಗೌರವ ನೀಡುವ, ದೇಶ ಮತ್ತು ಸಂವಿಧಾನದ ಮಾಹಿತಿ ನೀಡುವ ಕಾರ್ಯ ಶಾಲಾ ದಿನಗಳಲ್ಲಿ ಆಗಬೇಕು.
ನೂತನ ಶಿಕ್ಷಣ ನೀತಿ ಪರಿವರ್ತನಾ ಸುಧಾರಣೆ ತರಬೇಕು. ಯಾವ ಹಂತದಲ್ಲಿ ಯಾವ ರೀತಿಯ ಶಿಕ್ಷಣ ಬೇಕು ಎನ್ನುವ ನೀತಿ ಅಳವಡಿಸಲಾಗಿದೆ. ಸಮಾನತೆ, ಗುಣಮಟ್ಟ, ಸಾಮರ್ಥ್ಯ ಆಧಾರಿತ ಶಿಕ್ಷಣ ಮತ್ತು ಹೊಣೆಗಾರಿಕೆ ಇರುತ್ತದೆ. ಅವರ ಆಸಕ್ತಿ ಮತ್ತು ಸಾಮರ್ಥ್ಯಗಳಿಗೆ ಹೊಂದುವಂತಹ ಶಿಕ್ಷಣ ರೂಪಿಸಲಾಗಿದೆ. ಮಕ್ಕಳ ಸಾಮರ್ಥ್ಯ ಹೊರಗೆ ತರುವುದು ಶಿಕ್ಷಕರ ಕರ್ತವ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ, ‘ಯುವ ಶಕ್ತಿ ಹೆಚ್ಚಾಗಿರುವ ದೇಶದಲ್ಲಿ ಕೌಶಲದ ಪಾತ್ರ ಅತ್ಯಂತ ಪ್ರಮುಖವಾದುದು. ಯಾವುದೇ ಪದವಿ ಪ್ರಮಾಣ ಪತ್ರವಿದ್ದರೂ ಕೌಶಲವಿಲ್ಲದಿದ್ದರೆ ವ್ಯರ್ಥ. ಸವಾಲುಗಳಿಗೆ ತಕ್ಕಂತೆ ಕೌಶಲಾಧಾರಿತ ಶಿಕ್ಷಣ ಪಡೆಯುವ ಅನಿವಾರ್ಯತೆ ಇದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ಎನ್ಇಪಿ ಜಾರಿಗೆ ತಂದಿದೆ.
ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಶೇ 8ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಕಾಯ್ದಿರಿಸಿದೆ. ಇದು ಹಿಂದೆ ಕೇವಲ 3ರಷ್ಟು ಇತ್ತು’ ಎಂದು ವಿವರಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್‌ ಅಧ್ಯಕ್ಷ ಡಿ.ಎಸ್. ಅರುಣ್, ಕಾರ್ಯದರ್ಶಿ ಅನಿಲ್ ಪಿ. ಶೆಟ್ಟಿ, ಪ್ರತಿಭಾ ಅರುಣ್, ಬಿಂದು ಅನಿಲ್ ಶೆಟ್ಟಿ, ಶಿಕ್ಷಣ ಇಲಾಖೆಯ ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.