ADVERTISEMENT

ಯುಜಿಡಿ ಸಂಪರ್ಕ ತ್ವರಿತ; ಕಲ್ಮಶ ಮುಕ್ತ ತುಂಗಾ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 15:27 IST
Last Updated 17 ಸೆಪ್ಟೆಂಬರ್ 2019, 15:27 IST

ಶಿವಮೊಗ್ಗ:ಯುಜಿಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ತುಂಗಾ ನದಿಗೆ ಬಿಡುವ ಕಲ್ಮಶಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತುಂಗಾ ನದಿಯ ಎಡ ಭಾಗದಲ್ಲಿ 56 ಸಾವಿರ ಮನೆಗಳಿಗೆ ಈಗಾಗಲೇ ಯುಜಿಡಿ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ. ಬಲ ಭಾಗದಲ್ಲಿ 20 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ನಂತರ ತುಂಗಾ ನದಿ ಶುದ್ಧವಾಗಲಿದೆ ಎಂದರು.

ADVERTISEMENT

ನಗರದ ಬಡವರಿಗೆ 4,836 ಮನೆಗಳನ್ನು ನಿರ್ಮಿಸಿಕೊಡಲು ತಕ್ಷಣ ಟೆಂಡರ್‌ ಕರೆಯಬೇಕು. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಹಣ ತುಂಬಲು ಅವಕಾಶ ನೀಡಬೇಕು. ಎಲ್ಲ ಮನೆಗಳ ನಿರ್ಮಾಣ ಕಾಮಗಾರಿ ಕಾಲಮಿತಿಯ ಒಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ನಗರದಲ್ಲಿರುವ 46 ಕೊಳೆಗೇರಿಗಳ 1,590 ಕುಟುಂಬಗಳಿಗೆ ಮನೆ ನಿರ್ಮಿಸಲು ಅನುಮೋದನೆ ದೊರೆತಿತ್ತು. ಅವರಲ್ಲಿ 409 ಜನರು ಹಣ ತುಂಬಿದ್ದಾರೆ. ಕಾರ್ಮಿಕ ಇಲಾಖೆ ಹಣ ನೀಡದ ಕಾರಣ ಹಲವು ಮನೆಗಳು ಪೂರ್ಣಗೊಂಡಿಲ್ಲ ಎಂದು ಎಂಜಿನಿಯರ್ ಜ್ಯೋತಿ ಮಾಹಿತಿ ನೀಡಿದರು.

ಕಾರ್ಮಿಕ ಇಲಾಖೆ ತಕ್ಷಣ ಕಾರ್ಡ್ ನೀಡಬೇಕು. ಒಟ್ಟು ಹಣ ಬಿಡುಗಡೆ ಮಾಡಲು ಸೂಚಿಸಲಾಗುವುದು. ಪಟ್ಟಿ ಸಿದ್ಧಪಡಿಸಿಕೊಂಡು ಬೆಂಗಳೂರು ಸಭೆಗೆ ಬರುಬೇಕು ಎಂದು ಈಶ್ವರಪ್ಪ ಸೂಚಿಸಿದರು.

5060 ಜನರಿಗೆ ₹ 10 ಸಾವಿರ:

ಮಳೆಯಿಂದ ಸಂಕಷ್ಟ ಅನುಭವಿಸಿದ ಜನರಿಗೆ ತಲಾ ₹ 10 ಸಾವಿರ ನೀಡುವ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ. ಈಗಾಗಲೇ 5,060 ಜನರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ಇನ್ನೂ 1,600 ಜನರ ಪಟ್ಟಿ ಕಳುಹಿಸಿದ್ದಾರೆ. ಅವರ ವಿಳಾಸ ಹೊಂದಾಣಿಕೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.

ತುಂಗಾ ನಾಲೆಯ ಬದಿ ಇರುವ ಖಾಲಿ ಜಾಗದ ಸರ್ವೆ ನಡೆಸಬೇಕು. ಅಲ್ಲಿ ಸರ್ಕಾರಿ ಜಾಗವಿದ್ದರೆ ಜನರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.

ಶಾಲೆಗಳ ದುರಸ್ತಿಗೆ ಕ್ರಮ:

ಸರ್ಕಾರಿ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಮೂಲ ಸೌಲಭ್ಯ ಒದಗಿಸಬೇಕು. ಒಂದು ತಿಂಗಳ ಒಳಗಾಗಿ ಕಾಮಗಾರಿ ಆರಂಭಿಸಬೇಕು. ಶಾಲೆಗಳ ದುರಸ್ತಿಗೆ ಶಾಸಕರ ನಿಧಿಯ ₹ 25 ಕೋಟಿ ಬಳಸಿಕೊಳ್ಳಬಹುದು. ₹ 8 ಕೋಟಿ ಲಭ್ಯವಿದೆ. 47 ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ₹ 4.84 ಕೋಟಿ ನೀಡಲಾಗಿದೆ. ಜಿಲ್ಲೆಯ 450 ಅಂಗನವಾಡಿ ಕಟ್ಟಡಗಳ ದುರಸ್ತಿಗೂ ಆದ್ಯತೆ ನೀಡಬೇಕು ಎಂದರು.

ಎಲ್ಲಾ ವಾರ್ಡ್‌ಗಳಲ್ಲೂ ಉದ್ಯಾನ:

ಪಾಲಿಕೆ ವ್ಯಾಪ್ತಿಯ ಎಲ್ಲಾ 35 ವಾರ್ಡ್‌ಗಳಲ್ಲಿ ಉದ್ಯಾನ ನಿರ್ಮಾಣಕ್ಕಾಗಿ 15 ದಿನಗಳ ಒಳಗಾಗಿ ಅಂದಾಜು ಪಟ್ಟಿ ಸಲ್ಲಿಸಬೇಕು. ಪಾಲಿಕೆ ವ್ಯಾಪ್ತಿಯ 392 ಉದ್ಯಾನಗಳಲ್ಲಿ 100 ಉದ್ಯಾನಗಳ ಅಭಿವೃದ್ಧಿ ಪಡಿಸಲಾಗುತ್ತಿದೆ. 24 ಉದ್ಯಾನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. 8 ಈಗಾಗಲೇ ಪೂರ್ಣಗೊಂಡಿವೆ. ಡಿಸೆಂಬರ್ ಒಳಗೆ ಈ ಎಲ್ಲಾ ಉದ್ಯಾನಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಬೇಕು ಎಂದರು.

ಕುಡಿಯುವ ನೀರಿಗೆ ಆದ್ಯತೆ:

ಬೊಮ್ಮನಹಳ್ಳಿ, ಮಲಗೊಪ್ಪ ಸೇರಿದಂತೆ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಅಗತ್ಯ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಪೂರ್ಣಗೊಂಡ ಟ್ಯಾಂಕ್‌ಗಳನ್ನು ಲೋಕಾರ್ಪಣೆ ಮಾಡಬೇಕು. ಮೂರು ತಿಂಗಳ ಒಳಗೆ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯ್ತಿಸಿ ಇಒ ವೈಶಾಲಿ, ಉಪ ಮೇಯರ್ ಚನ್ನಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.