ADVERTISEMENT

ಶಿವಮೊಗ್ಗ: ಯುಪಿಎಎಸ್‌ಸಿ ಪರೀಕ್ಷೆ; ರ‍್ಯಾಂಕಿಂಗ್ ಉತ್ತಮಪಡಿಸಿಕೊಂಡ ಮೇಘನಾ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 15:14 IST
Last Updated 16 ಏಪ್ರಿಲ್ 2024, 15:14 IST
   

ಶಿವಮೊಗ್ಗ: ಇಲ್ಲಿನ ಹಾಲ್ಕೊಳ ಬಡಾವಣೆಯ ನಿವಾಸಿ ಐ.ಎನ್.ಮೇಘನಾ ಮಂಗಳವಾರ ಪ್ರಕಟವಾದ 2023–24ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಪರೀಕ್ಷೆಯ ಫಲಿತಾಂಶದಲ್ಲಿ 589ನೇ ರ‍್ಯಾಂಕ್ ಪಡೆದಿದ್ದಾರೆ.

ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ ಹಾಗೂ ಜಿ.ಜಿ.ನಮಿತಾ ದಂಪತಿ ಪುತ್ರಿ ಮೇಘನಾ 2022–23ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ 617ನೇ ರ‍್ಯಾಂಕ್ ಪಡೆದಿದ್ದರು. ಅವರಿಗೆ ಐಪಿಎಸ್‌ ಹುದ್ದೆ ಲಭಿಸಿದ್ದು, ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯಾಗಿ ತರಬೇತಿಯಲ್ಲಿ ಇದ್ದಾರೆ. ಐಎಎಸ್ ಹುದ್ದೆ ಪಡೆಯುವ ಉದ್ದೇಶದಿಂದ ಮೇಘನಾ ಮತ್ತೊಮ್ಮೆ ಪರೀಕ್ಷೆ ಎದುರಿಸಿದ್ದು, ಈ ಬಾರಿ ರ‍್ಯಾಂಕಿಂಗ್ ಉತ್ತಮ ಪಡಿಸಿಕೊಂಡಿದ್ದಾರೆ. 2021–22ನೇ ಸಾಲಿನಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದ್ದರೂ ಸಂದರ್ಶನದಲ್ಲಿ ತೇರ್ಗಡೆ ಆಗಿರಲಿಲ್ಲ.

ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಜಿಲ್ಲೆ ಬಂಡೀಪುರ ಹಾಗೂ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದಾರೆ. ಶಿವಮೊಗ್ಗದ ಸಾಂದೀಪನಿ ಇಂಗ್ಲಿಷ್ ಶಾಲೆಯಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗದ ಪೇಸ್‌ ಕಾಲೇಜಿನಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.

ADVERTISEMENT

‘ಬೆಂಗಳೂರಿನ ವಿಜಯನಗರದ ಇನ್‌ಸೈಟ್ಸ್‌ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆದಿರುವ ಪುತ್ರಿ ಎಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಬೆಳಿಗ್ಗೆ 7 ಗಂಟೆಯಿಂದ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದಳು. ಈ ಬಾರಿ ಐಎಎಸ್‌ ಹುದ್ದೆ ಲಭಿಸುವ ವಿಶ್ವಾಸವಿದೆ’ ಎಂದು ಐ.ಎಂ. ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.