ADVERTISEMENT

ಮುಳುಗಡೆ ಸಂತ್ರಸ್ತರ ಸಮಸ್ಯೆ: ಐಎಎಸ್ ಅಧಿಕಾರಿ ನೇಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 5:48 IST
Last Updated 27 ಡಿಸೆಂಬರ್ 2022, 5:48 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಳಗಾವಿ: ‘ಜಲಾಶಯ ನಿರ್ಮಾಣ ಸೇರಿದಂತೆ ನೀರಾವರಿ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡಮುಳುಗಡೆ ಸಂತ್ರಸ್ತರು ತಮ್ಮ ಜಾಗದ ಮೂಲ ದಾಖಲೆ ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಎಎಸ್ ಅಧಿಕಾರಿಯನ್ನು ನೇಮಿಸಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ, ‘ಭೂಮಿಯ ಮೂಲ ದಾಖಲೆ ಲಭ್ಯ ಇಲ್ಲದಿರುವ ಕಾರಣ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ’ ಎಂದರು.

ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ‘ಮುಳುಗಡೆ ಸಂತ್ರಸ್ತರ ಸಮಸ್ಯೆ ರಾಜ್ಯದ ವಿವಿಧ ಕಡೆ ಇದೆ. ಅವರ ಸಮಸ್ಯೆಯನ್ನು ಸರ್ಕಾರ ಮಾನವೀಯತೆ ನೋಡಬೇಕು. ತಾಂತ್ರಿಕ ಕಾರಣ ಹೇಳದೆ ಪರಿಹಾರ ಒದಗಿಸಬೇಕು. ಈ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು’ ಎಂದರು.

ADVERTISEMENT

‘ಹಾಸನದ ಆಲೂರು ತಾಲ್ಲೂಕಿನ ಬ್ಯಾಬಾ ಫಾರೆಸ್ಟ್ ಗ್ರಾಮದಲ್ಲಿ ಹೇಮಾವತಿ ಜಲಾಶಯಕ್ಕೆ ಮುಳುಗಡೆಯಾದ ಭೂಮಿಯ ಸಂತ್ರಸ್ತರ ಪೈಕಿ 247 ಮಂದಿಗೆ ಈವರೆಗೆ ಭೂಮಿ ಮಂಜೂರಾಗಿಲ್ಲ. ದಾಖಲೆಗಳು ಸರಿಯಿಲ್ಲ, ಕಡತಗಳ ನಾಪತ್ತೆ ಇತರೆ ಕಾರಣ ಹೇಳಿ ಭೂಮಿ ನೀಡದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರಿಗೆ ಭೂಮಿ ಮಂಜೂರಾತಿಗೆ ಆಂದೋಲನ ಮಾದರಿಯಲ್ಲಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಅಶೋಕ, ‘234 ಸಂತ್ರಸ್ತರ ದಾಖಲೆಗಳ ನೈಜತೆ ಪರಿಶೀಲಿಸಬೇಕಿದೆ. ಮೂಲದಾಖಲೆಗಳು, ಹಕ್ಕುಪತ್ರಗಳನ್ನು ಒದಗಿಸಿದವರಿಗೆ ಭೂಮಿ ಮಂಜೂರಾಗಿದೆ. ಸೂಕ್ತ ದಾಖಲೆಗಳಿದ್ದರೆ ತಕ್ಷಣವೇ ಭೂಮಿ ಮಂಜೂರಾತಿಗೆ ಕ್ರಮ ವಹಿಸಲಾಗುವುದು’ ಎಂದರು.

ಆಗ ಕುಮಾರಸ್ವಾಮಿ, ‘ನೈಜತೆ ಇಲ್ಲ ಎಂದರೆ, ಆ ದಾಖಲೆ ವಿತರಿಸಿದ ಅಧಿಕಾರಿಯ ಲೋಪವಲ್ಲವೇ. ಪರಿಹಾರ ಹಾಗೂ ಪುನಶ್ಚೇತನ ವಿಭಾಗದ ಅಧಿಕಾರಿಗಳೇ ಕಡತ ನಾಪತ್ತೆಗೆ ಹೊಣೆಯಲ್ಲವೇ. ಕಡತ ತಿಂದಿರುವುದು ಅಧಿಕಾರಿ ಹೆಗ್ಗಣಗಳು. ಅಧಿಕಾರಿಗಳ ತಪ್ಪಿಗೆ ಸಂತ್ರಸ್ತರನ್ನು ಹೊಣೆ ಮಾಡುವುದು ಎಷ್ಟು ಸರಿ? ಭೂಮಿ ಮಂಜೂರಾತಿ ದಾಖಲೆಯಲ್ಲಿ ತಹಶೀಲ್ದಾರ್ ಸಹಿಯೇ ಇಲ್ಲ’ ಎಂದು ಸದನದ ಗಮನ ಸೆಳೆದರು.

ಅದಕ್ಕೆ ದನಿಗೂಡಿಸಿದ ಜೆಡಿಎಸ್‍ನ ಎ.ಟಿ. ರಾಮಸ್ವಾಮಿ, ‘ಮುಳುಗಡೆ ಪ್ರದೇಶದ ಸಂತ್ರಸ್ತರಿಗೆ ಸಾಕಷ್ಟು ಅನ್ಯಾಯವಾಗಿದೆ. ಮೂಲ ದಾಖಲಾತಿಗಳು ಕಂದಾಯ ಇಲಾಖೆಯಲ್ಲಿ ಇರಬೇಕಲ್ಲವೇ. ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ದಾಖಲೆಗಳಿಲ್ಲ ಎಂದರೆ ಕಳೆದವರು ಯಾರು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.