ADVERTISEMENT

ಸಾಗರ ರೈಲು ನಿಲ್ದಾಣಕ್ಕೆ ಲೊಹಿಯಾ ಹೆಸರಿಡಿ: ಕಲ್ಲೂರು ಮೇಘರಾಜ್

-

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:20 IST
Last Updated 13 ಜೂನ್ 2025, 14:20 IST
ಕಲ್ಲೂರು ಮೇಘರಾಜ್
ಕಲ್ಲೂರು ಮೇಘರಾಜ್   

ಶಿವಮೊಗ್ಗ : ಸಾಗರ ಬಳಿಯ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಹಿರಿಯ ಸಮಾಜವಾದಿ ಡಾ. ರಾಮಮನೋಹರ ಲೋಹಿಯಾ ಅವರ ಹೆಸರು ಇಡುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಲ್ಲೂರು ಮೇಘರಾಜ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

1951ರ ಜೂನ್ 13ರಂದು ಸಾಗರದ ಕಾಗೋಡು ಗ್ರಾಮದಲ್ಲಿ ನಡೆಯುತ್ತಿದ್ದ ಉಳುವವನೇ ಹೊಲದೊಡೆಯ ಸತ್ಯಾಗ್ರಹದಲ್ಲಿ ಡಾ. ರಾಮಮನೋಹರ ಲೋಹಿಯಾ ಪಾಲ್ಗೊಂಡಿದ್ದರು. ಅದೇ ದಿನ ತಡರಾತ್ರಿ ಅವರು ರೈಲು ನಿಲ್ದಾಣದಲ್ಲೇ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಬಂಧನದ ವಿಷಯ ಅಂತರಾಷ್ಟ್ರೀಯಮಟ್ಟದ ಸುದ್ದಿಯಾಗಿತ್ತು. ಅವರ ಬಂಧನದ ಕಾವಿನಲ್ಲಿಯೇ ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆ ಕೂಡ ಜಾರಿಗೆ ಬಂದಿತ್ತು ಎಂದರು.

ಈ ಐತಿಹಾಸಿಕ ಕ್ಷಣವನ್ನು ಸದಾ ನೆನಪಿನಲ್ಲಿಡಬೇಕಾಗುತ್ತದೆ. ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಮತ್ತು ಶಿವಮೊಗ್ಗ ಜಿಲ್ಲಾ ಹೋರಾಟ ಸಮಿತಿಯಿಂದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ತೀರ್ಮಾನಿಸಿ 2000ನೇ ಇಸವಿ ಜೂನ್ 13ರಂದು ರೈಲ್ವೆ ನಿಲ್ದಾಣದ ಎದುರು ಡಾ.ರಾಮಮನೋಹರ ಲೋಹಿಯಾ ನಿಲ್ದಾಣ ಎಂಬ ಫಲಕ ಅಳವಡಿಸಿದ್ದೆವು. ಆಗ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಅರುಣ್ ಪ್ರಸಾದ್, ಪ್ರಮುಖರಾದ ಎಚ್. ಗಣಪತಿಯಪ್ಪ, ನಾ. ಡಿಸೋಜಾ, ಕೋಣಂದೂರು ಲಿಂಗಪ್ಪ, ಕೆ.ಟಿ. ಗಂಗಾಧರ್ ನಮ್ಮೊಂದಿಗೆ ಇದ್ದರು ಎಂದು ನೆನಪು ಮಾಡಿಕೊಂಡರು.

ADVERTISEMENT

ರೈಲು ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ಆಗ್ರಹಿಸಿ ಈ ಹಿಂದೆ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಆಗ ಕೇಂದ್ರದ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರೊಂದಿಗೆ ತೆರಳಿ ಗೃಹಸಚಿವ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಅವರು ಕೂಡ ಅದಕ್ಕೆ ಒಪ್ಪಿದ್ದರು. ಈಗ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಷಾ ಅವರಿಗೂ ಪತ್ರ ಬರೆದು ಡಾ.ರಾಮ ಮನೋಹರ ಲೋಹಿಯಾ ಹೆಸರಿಡಲು ಒತ್ತಾಯಿಸಿದ್ದೇವೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಚ್.ಎಂ. ಸಂಗಯ್ಯ, ಜನಮೇಜಿರಾವ್, ಆದಿಶೇಷ, ಕೋಡ್ಲು ಶ್ರೀಧರ್, ನಾಗೇಶ್‌ರಾವ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.