ತೀರ್ಥಹಳ್ಳಿ: ಕವಿಗಳು ಕಟ್ಟಿದ ಕಾವ್ಯವನ್ನು ಇತಿಹಾಸವೆಂದು, ಇತಿಹಾಸವನ್ನು ಪುರಾಣವೆಂದು ಕನ್ನಡದ ವಿವೇಕ ಗೊಂದಲಕ್ಕೆ ಸಿಲುಕಿದೆ. ಕಾವ್ಯ, ಪುರಾಣ, ಇತಿಹಾಸವನ್ನು ಕವಿಗಳ ಸೃಷ್ಟಿ ಎನ್ನುವುದನ್ನು ಮರೆತು ರಾಜಕೀಯಕ್ಕೆ ಬಳಸುತ್ತಿದ್ದೇವೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡುವಾಗ ಕನ್ನಡದ ವಿವೇಕ ಏನೆಂಬುದನ್ನು ಆದಿ ಕವಿ ಪಂಪ “ಕವಿ ಬಂಧದೊಳ್ ಕಟ್ಟಿದರಲ್ತೆ” ಎನ್ನುವ ಮೂಲಕ ತಿಳಿಸಿದ್ದಾನೆ ಎಂದು ಹೇಳಿದರು.
ಇತಿಹಾಸದಲ್ಲಿ ರಾಮ ಇದ್ದಾನೆ ಎಂಬುದು ನಿಜವಾದರೆ ರಾವಣ ಇರುವುದು ಕೂಡ ಅಷ್ಟೇ ಸತ್ಯ. ಇಂತಿರುವಾಗ 10 ತಲೆಗಳನ್ನು ಇಟ್ಟುಕೊಂಡ ರಾವಣ ಅದನ್ನು ಹೇಗೆ ಸರಿದೂಗಿಸಿದ. ಒಂದು ಕಡೆ 5 ತಲೆ ಕೂರಿಸಿದರೆ ಇನ್ನೊಂದು ಕಡೆ ವ್ಯತ್ಯಾಸವಾಗುತ್ತದೆ. ಇಂತಹ ಪ್ರಶ್ನೆಗಳು ಸಮಾಜ ಕೇಳಬಾರದೆ. ಧರ್ಮದ ಹೆಸರಲ್ಲಿ ಅನಾಚಾರ ಮಾಡುತ್ತಿರುವವರು ಧರ್ಮಿಷ್ಟರಾಗಿ ಉಳಿದಿದ್ದಾರೆಯೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಏಕೊಪಾಧ್ಯಯ 7000 ಸಾವಿರ ಶಾಲೆಗಳಿವೆ. ಅಷ್ಟೇ ಶಾಲೆಗಳಿಗೆ ಹಕ್ಕುಪತ್ರ ಇಲ್ಲ. ಈಚೆಗೆ ಒಂದು ಶಾಲೆಗೆ ಭೇಟಿ ಕೊಟ್ಟಾಗ 7ನೇ ತರಗತಿ ವಿದ್ಯಾರ್ಥಿನಿ 3ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಿದ್ದಳು. ಸಾಹಿತ್ಯ ಸಮ್ಮೇಳನ ಹೀಗೆ ಕನ್ನಡ ಉಳಿಸಿ ಎಂದು ಹೇಳುವಾಗ ಶಾಲೆಗಳು ಹಿಂದೆ ದಾನಕೊಟ್ಟವರ ಪಾಲಾಗುತ್ತಿದೆ. ಖಾಸಗಿಯವರಿಗೆ ಮಾರುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಶಾಲೆಗಳು ಮುಚ್ಚಿದ ಮೇಲೆ ಕನ್ನಡ ಉಳಿಯುವುದಾದರೂ ಹೇಗೆ ಎಂದು ಕೇಳಿದರು.
ದ್ವೈತ, ಅದ್ವೈತ, ವಿಶಿಷ್ಟದ್ವೈತ ಭಾರತೀಯ ತತ್ವ ಶಾಸ್ತ್ರದ ಔನ್ಯತ್ಯಕ್ಕೆ ಸಾಕ್ಷಿ. ಟೀಕೆಗಳು ಅಂತಿರಲಿ ಭಾಷೆ, ಸಮುದಾಯ, ತತ್ವಶಾಸ್ತ್ರಗಳ ಸಾವಾಗಲು ಯಾರು ಕಾರಣ. ರಾಜಾಡಳಿತದಲ್ಲಿ ಗಡಿರೇಖೆಗಳು ಹಿಗ್ಗುವುದು, ಕುಗ್ಗುವುದು ಸಾಮಾನ್ಯವಾಗಿತ್ತು. ಏಕೀಕರಣದ ನಂತರ ಗಡಿರೇಖೆ ತಟಸ್ಥವಾಗಿರುತ್ತದೆ. ಕಾಸರಗೋಡು ಬೇಕೆಂದರು ಸಿಗುವುದಿಲ್ಲ. ಕರ್ನಾಟಕ ದ್ರಾವಿಡ ಮತ್ತು ಉತ್ತರದ ನಾಗರ ಶೈಲಿ ಒಳಗೊಂಡು ಹೊಸದಾಗಿ ವೇಸರ ಶೈಲಿ ಸೃಷ್ಟಿಸಿಕೊಂಡಿದೆ. ನನ್ನ ಸಂಸ್ಕೃತಿ, ಧರ್ಮವೇ ಶ್ರೇಷ್ಟ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಪ್ರಾಸ್ತಾವಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಕೆ.ಆರ್.ಉಮಾದೇವಿ ಉರಾಳ್, ರಂಗಾಯಣ ನಿರ್ದೇಶಕ ಪ್ರಸನ್ನ ಡಿ., ಪ್ರಮುಖರಾದ ಸರ್ಜಾಶಂಕರ್ ಹರಳೀಮಠ, ಲೀಲಾವತಿ ಜಯಶೀಲ, ಸೊಪ್ಪುಗುಡ್ಡೆ ರಾಘವೇಂದ್ರ, ಹಾಲಿಗೆ ನಾಗರಾಜ್, ಗಾಯತ್ರಿ ಶೇಷಗಿರಿ, ಸೌಳಿ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.