ADVERTISEMENT

ಸಾರ್ವಜನಿಕ ಸೇವೆ ಅವಕಾಶ ಬಳಸಿಕೊಳ್ಳಿ

ರಾಜ್ಯ ಮೀಸಲು ಪೊಲೀಸ್ ನಿರ್ಗಮನ ಪಥಸಂಚಲನದಲ್ಲಿ ಎಡಿಜಿಪಿ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 5:52 IST
Last Updated 12 ಜೂನ್ 2022, 5:52 IST
ಶಿವಮೊಗ್ಗ ಸಮೀಪದ ಮಾಚೇನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ರಾಜ್ಯ ಮೀಸಲು ಪೊಲೀಸ್‌ ಪಡೆಯ ಹೆಚ್ಚುವರಿ ಮಹಾ ನಿರ್ದೇಶಕ ಆರ್. ಹಿತೇಂದ್ರ ಮಾತನಾಡಿದರು
ಶಿವಮೊಗ್ಗ ಸಮೀಪದ ಮಾಚೇನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ರಾಜ್ಯ ಮೀಸಲು ಪೊಲೀಸ್‌ ಪಡೆಯ ಹೆಚ್ಚುವರಿ ಮಹಾ ನಿರ್ದೇಶಕ ಆರ್. ಹಿತೇಂದ್ರ ಮಾತನಾಡಿದರು   

ಶಿವಮೊಗ್ಗ: ‘ಸಾರ್ವಜನಿಕರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶ ಇರುವ ಹಾಗೂ ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯಲ್ಲಿ ಕೆಲಸ ದೊರೆತಿರುವುದು ಅದೃಷ್ಟ. ಅದರ ಸದ್ಬಳಕೆ ಮಾಡಿಕೊಳ್ಳಿ’ ಎಂದು ರಾಜ್ಯ ಮೀಸಲು ಪೊಲೀಸ್‌ ಪಡೆಯ ಹೆಚ್ಚುವರಿ ಮಹಾ ನಿರ್ದೇಶಕ ಆರ್.ಹಿತೇಂದ್ರ ಸಲಹೆ ನೀಡಿದರು.

ಇಲ್ಲಿನ ಮಾಚೇನಹಳ್ಳಿಯ ಕೆಎಸ್‌ಆರ್‌ಪಿ ಎಂಟನೇ ಪಡೆ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್‌ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚನದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನದ್ದು. ಅದನ್ನು ಮರೆಯದೆ ಸಾರ್ವಜನಿಕರಿಗೆ, ಅಶಕ್ತರಿಗೆ ಸಹಾಯ ಮಾಡಬೇಕು. ನಿಮ್ಮಿಂದ ಸಾರ್ವಜನಿಕರು ಹೆಚ್ಚಿನ ಸೇವೆ ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿಸನ್ನದ್ಧರಾಗಿರಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಪ್ರಶಿಕ್ಷಣಾರ್ಥಿಗಳಾಗಿದ್ದ ವೇಳೆ ಅನೇಕ ರೀತಿಯ ಒಳಾಂಗಣ ಮತ್ತು ಹೊರಾಂಗಣ ತರಬೇತಿ ನೀಡಲಾಗಿದ್ದು, ಇದೇ ದೈಹಿಕ ಸದೃಢತೆಯನ್ನು ಉಳಿಸಿಕೊಂಡು ಹೋಗಬೇಕು. ಉತ್ತಮ ಆರೋಗ್ಯವಿದ್ದಲ್ಲಿ ಉತ್ತಮ ಮನಸ್ಸು ಇರುತ್ತದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು. ಉನ್ನತ ವಿದ್ಯಾಭ್ಯಾಸ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಎಲ್ಲರಿಗೂ ಇನ್ನೂ ಒಳ್ಳೆಯ ಹುದ್ದೆ ಲಭಿಸಲಿ. ಇಲಾಖೆಯಲ್ಲಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿರಿ’ ಎಂದು ಕಿವಿಮಾತುಹೇಳಿದರು.

ಕೆಎಸ್‍ಆರ್‌ಪಿ ಎಂಟನೇ ಪಡೆಯ ಕಮಾಂಡೆಂಟ್ ಬಿ.ಡಿ.ಲೋಕೇಶ್ ವರದಿ ವಾಚಿಸಿದರು. ಏಳನೇ ಪಡೆಯ ಕಮಾಂಡೆಂಟ್ ಬಿ.ಎಂ. ಪ್ರಸಾದ್ ಪ್ರತಿಜ್ಞಾವಿಧಿಬೋಧಿಸಿದರು.

ನಿರ್ಗಮನ ಪ್ರಶಿಕ್ಷಣಾರ್ಥಿಗಳ ಶಿಸ್ತಿನ ಮತ್ತು ಕ್ರಮಬದ್ಧ ಪಥ ಸಂಚಲನ, ವಾದ್ಯಮೇಳ, ಕನ್ನಡದಲ್ಲಿ ನೀಡಿದ ಕವಾಯತು ಆದೇಶ ಎಲ್ಲರ ಗಮನ ಸೆಳೆಯಿತು.

ರಾಜ್ಯ ಮೀಸಲು ಪೊಲೀಸ್‍ ಉಪ ಪೊಲೀಸ್ ಮಹಾ ನಿರೀಕ್ಷಕ ಎಂ.ವಿ. ರಾಮಕೃಷ್ಣ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಬಿ.ಎಂ. ಲಕ್ಷ್ಮೀಪ್ರಸಾದ್, ಅಧಿಕಾರಿಗಳು ಪಾಲ್ಗೊಂಡಿದ್ದರು.

ಉನ್ನತ ವಿದ್ಯಾಭ್ಯಾಸ ಪಡೆದ ಪ್ರಶಿಕ್ಷಣಾರ್ಥಿಗಳು

ನಿರ್ಗಮಿತ 224 ಪ್ರಶಿಕ್ಷಣಾರ್ಥಿಗಳಲ್ಲಿ 14 ಮಂದಿ ಸ್ನಾತಕೋತ್ತರ ಪದವೀಧರರು, 14 ಜನ ಎಂಜಿನಿಯರಿಂಗ್ ಓದಿದ್ದಾರೆ. 120 ಜನರು ಪದವೀಧರರು, 62 ಮಂದಿ ಪಿಯುಸಿ, ಒಬ್ಬರು ಐಟಿಐ, ಐವರು ಡಿಪ್ಲೊಮಾ ಹಾಗೂ ಎಂಟು ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.