ADVERTISEMENT

ಅಧ್ಯಯನಶೀಲತೆ ಬೆಳೆಸಲು ಸೂಕ್ತ ಅವಕಾಶ

ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 12:23 IST
Last Updated 3 ಆಗಸ್ಟ್ 2019, 12:23 IST
ಡಾ.ಬಿ.ಪಿ.ವೀರಭದ್ರಪ್ಪ
ಡಾ.ಬಿ.ಪಿ.ವೀರಭದ್ರಪ್ಪ   

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಉನ್ನತ ಅಧ್ಯಯನಶೀಲತೆ ಬೆಳೆಸಲು ಅವಕಾಶ ಕಲ್ಪಿಸಲಾಗುವುದು. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಲಾಗವುದು ಎಂದು ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ ಭರವಸೆ ನೀಡಿದರು.

ಸಂಶೋಧನೆ, ಬೋಧನೆಗೆ ಹೆಚ್ಚು ಆದ್ಯತೆ ನೀಡಲಾಗುವುದು. ಆಡಳಿತಾತ್ಮಕ ಸುಧಾರಣೆಗೆ ಇರುವ ಎಲ್ಲ ಅವಕಾಶ ಬಳಸಿಕೊಳ್ಳಲಾಗುವುದು. ಈಗಾಗಲೇ ಈ ವಿಶ್ವವಿದ್ಯಾಲಯ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಜಾಗತಿಕಮಟ್ಟದಲ್ಲಿ ಸ್ಥಾನ ದೊರಕಿಸಲು ಶ್ರಮಿಸಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೇಶ, ವಿದೇಶಗಳ ನೂರಾರು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದೇನೆ. ಆ ಅನುಭವದ ಆಧಾರದ ಮೇಲೆ ಸ್ಥಳೀಯ ವಿಷಯಗಳ ತಳಹದಿಯಲ್ಲಿ ವರ್ತಮಾನಕ್ಕೆ ತಕ್ಕಂತೆ ಹೊಂದಿಕೊಂಡು ಮಾದರಿ ವಿದ್ಯಾಲಯ ರೂಪಿಸಲಾಗುವುದು. ಎಲ್ಲ ವಿಭಾಗಗಳಿಗೂ ಮರು ಜೀವಂತಿಕೆ, ಸಂಶೋಧನೆಯ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು. ಕಾಲೇಜುಗಳಿಗೆ ಸೌಲಭ್ಯ ವಿಸ್ತರಿಸುವುದು, ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಆರ್ಥಿಕವಾಗಿ ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದರು.

ADVERTISEMENT

ವಿದ್ಯಾರ್ಥಿಗಳಿಗೆ ವಿಧಿಸುತ್ತಿರುವ ಶುಲ್ಕ ಸ್ವಲ್ಪ ಜಾಸ್ತಿ ಇದೆ. ಪ್ರತಿ ವರ್ಷ ಹೆಚ್ಚಳ ಮಾಡಬಾರದು. ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೆ ತೊಂದರೆಯಾಗದಂತೆ ಶುಲ್ಕ ನಿಯಂತ್ರಣಕ್ಕೆ ಚಿಂತಿಸಲಾಗುವುದು. ಹೆಚ್ಚಿನ ಅನುದಾನ ನೀಡಲು ಸರ್ಕಾರ, ಯುಜಿಸಿಗೆ ಮನವಿ ಮಾಡಲಾಗುವುದು ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಭೋಜಾನಾಯ್ಕ, ಪರೀಕ್ಷಾಂಗ ಕುಲಸಚಿವ ರಾಜಾನಾಯ್ಕ, ಹಣಕಾಸು ಅಧಿಕಾರಿ ಹಿರೇಮಣಿ ನಾಯ್ಕ, ಸಾರ್ವಜನಿಕ ಸಂಪರ್ಕಾಧಿಕಾರಿ ಸತ್ಯಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.