ADVERTISEMENT

ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಕಟುವಾಗಿ ಟೀಕಿಸಿಲ್ಲ: ವಿಜಯೇಂದ್ರ

ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:16 IST
Last Updated 24 ನವೆಂಬರ್ 2022, 5:16 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಶಿಕಾರಿಪುರ: ‘ದೇಶದಲ್ಲಿ ಭಯೋತ್ಪಾದನೆ ಹಾಗೂ ದುಷ್ಕೃತ್ಯ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಕಟುವಾಗಿ ಟೀಕಿಸಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದುಷ್ಕೃತ್ಯ ಖಂಡಿಸಿದರೆ ಅಲ್ಪಸಂಖ್ಯಾತರಿಗೆ ನೋವು ಆಗುತ್ತದೆ ಎಂದು ಕಾಂಗ್ರೆಸ್ ದುಷ್ಕೃತ್ಯ ಖಂಡಿಸುವುದಿಲ್ಲ. ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗದಲ್ಲಿ ನಡೆದ ದುಷ್ಕೃತ್ಯಗಳಿಗೆ ಯಾವುದೇ ಜಾತಿ ಧರ್ಮ ಹಣೆ ಪಟ್ಟಿ ಕಟ್ಟುವುದು ಸರಿಯಲ್ಲ. ನಿಸ್ಸಂಶಯವಾಗಿ ಕೃತ್ಯಗಳನ್ನು ಖಂಡಿಸಬೇಕು. ಆದರೆ, ಕಾಂಗ್ರೆಸ್‌ನಿಂದ ಖಂಡನೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತುದಿ ಮುಟ್ಟಿಸುತ್ತದೆ’ ಎಂದರು.

‘ಜನರ ಮುಂದೆ ಸತ್ಯಾಂಶ ಹೊರಬರುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದೇವೆ ಎಂದು ಹೇಳಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಹಗರಣಗಳು ಪ್ರಸ್ತುತ ಜನರ ಮುಂದೆ ಬರುತ್ತಿವೆ. ಆ ಸರ್ಕಾರ ಇದ್ದಾಗ ಮುಖ್ಯಮಂತ್ರಿ ಹಾಗೂ ಸಚಿವರ ಮೇಲೆ ಆರೋಪಗಳು ಬಂದರೂ ಮುಚ್ಚಿಹಾಕುವ ಕೆಲಸ ಮಾಡಿದರು. ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಹಗರಣಗಳು ಹೊರಗೆ ಬರುತ್ತವೆ’ ಎಂದು ಭವಿಷ್ಯ ನುಡಿದರು.

ADVERTISEMENT

‘ಕಾಂಗ್ರೆಸ್ ಘಟಾನುಘಟಿ ನಾಯಕರ ಮಧ್ಯೆ ಯಾವ ರೀತಿ ಭಿನ್ನಾಭಿಪ್ರಾಯಗಳು ಇವೆ, ಅಸಮಾಧಾನದ ಹೊಗೆ ಆಡುತ್ತಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಹೊಗೆ ಸ್ಫೋಟವಾಗುತ್ತದೆ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.