ADVERTISEMENT

ಮಿತಿ ಮೀರಿದ ಕಾಡುಕೋಣಗಳ ಹಾವಳಿ

ಮತ್ತಿಕೈ ಗ್ರಾಮದಲ್ಲಿ ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:31 IST
Last Updated 21 ಸೆಪ್ಟೆಂಬರ್ 2022, 6:31 IST
ಹೊಸನಗರ ತಾಲ್ಲೂಕು ಮತ್ತಿಕೈ ಗ್ರಾಮದಲ್ಲಿ ಕಾಡುಕೋಣ ಹಾವಳಿ ತಡೆಗಟ್ಟಲು ಒತ್ತಾಯಿಸಿ ನಗರ ವಲಯಾಧಿಕಾರಿ ಸಂಜಯ್‌ ಅವರಿಗೆ ಮನವಿ ನೀಡಲಾಯಿತು.
ಹೊಸನಗರ ತಾಲ್ಲೂಕು ಮತ್ತಿಕೈ ಗ್ರಾಮದಲ್ಲಿ ಕಾಡುಕೋಣ ಹಾವಳಿ ತಡೆಗಟ್ಟಲು ಒತ್ತಾಯಿಸಿ ನಗರ ವಲಯಾಧಿಕಾರಿ ಸಂಜಯ್‌ ಅವರಿಗೆ ಮನವಿ ನೀಡಲಾಯಿತು.   

ಹೊಸನಗರ: ಹೊಸೂರು– ಸಂಪೇಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ಬೆಳೆಯನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಮತ್ತಿಕೈ ಗ್ರಾಮಸ್ಥರು ಸೋಮವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ನಗರ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ‘ಕಾಡುಕೋಣಗಳು ನಮ್ಮ ಜೀವ ಹಿಂಡುತ್ತಿದ್ದು, ನಮ್ಮ ಬದುಕಿನ ಮೇಲೆ ನೇರ ಪರಿಣಾಮವಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಮತ್ತಿಕೈ ಗ್ರಾಮದಲ್ಲಿ 15 ಮಜರೆ ಹಳ್ಳಿಗಳಿದ್ದು, ಜನರಿಗೆ ಕೃಷಿ ಬದುಕೇ ಆಧಾರವಾಗಿದೆ. ಆದರೆ ಕಾಡುಕೋಣಗಳ ಹಾವಳಿಯಿಂದ ಅಡಿಕೆ ಬೆಳೆ ಸರ್ವ ನಾಶವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದ ನಗರ ವಲಯಾಧಿಕಾರಿ ಸಂಜಯ್ ಗ್ರಾಮಸ್ಥರ ಮನವಿ ಆಲಿಸಿದರು. ಆದರೆ ಡಿಎಫ್ಒ ಎಂ.ರಾಮಕೃಷ್ಣಪ್ಪ ಬಂದು ಮನವಿ ಆಲಿಸಬೇಕು ಎಂದು ಪಟ್ಟು ಹಿಡಿದ ಕಾರಣ ಅವರಿಗೆ ಕರೆ ಮಾಡಿ ಗ್ರಾಮಸ್ಥರ ಬೇಡಿಕೆಯನ್ನು ಮುಂದಿಟ್ಟರು.

ಬಳಿಕ ಗ್ರಾಮಸ್ಥರು, ‘ಸೋಲಾರ್ ತಂತಿ ಬೇಲಿಯಿಂದ ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ತರುವುದು ಅಸಾಧ್ಯ. ನಮ್ಮ ಗ್ರಾಮದಿಂದ ಮೂಕಾಂಬಿಕ ಅಭಯಾರಣ್ಯ ಕೇವಲ 3 ಕಿ.ಮೀ. ದೂರದಲ್ಲಿದೆ. ಕಾಡುಕೋಣಗಳನ್ನು ಅಲ್ಲಿಗೆ ಅಟ್ಟುವ ಮೂಲಕ ಕ್ರಮ ಕೈಗೊಳ್ಳಿ’ ಎಂದು ಪಟ್ಟು ಹಿಡಿದರು.

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಡಿಎಫ್ಒ ಎಂ. ರಾಮಕೃಷ್ಣ, ‘ಮತ್ತಿಕೈ ಗ್ರಾಮದಲ್ಲಿ ‘ಆ್ಯಂಟಿ ಡಿಫ್ರೆಷನ್ ಕ್ಯಾಂಪ್’ (ಕಾಡು ಪ್ರಾಣಿ ಹಾವಳಿ ತಡೆ ಶಿಬಿರ) ಆಯೋಜನೆ ಮಾಡಿ ಕೂಡಲೇ ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದರು. ಬಳಿಕ ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಸಂಜಯ್ ಅವರಿಗೆ ಸೂಚಿಸಿದರು.

ಕರುಣಾಕರಶೆಟ್ಟಿ, ಬಿ.ಎಸ್.ಮಹಾಬಲೇಶ್ವರ ಭಟ್, ಕೊಡಸೆ ಚಂದ್ರಪ್ಪ, ಸಾವಿತ್ರಿ ವೆಂಕಟರಮಣ ಭಟ್, ಬಿ.ಡಿ.ರಾಧಾಕೃಷ್ಣ, ವೆಂಕಟ ರಮಣ ಭಟ್, ಸುಬ್ರಹ್ಮಣ್ಯ, ಕೆ.ಟಿ.ರಾಜು, ಎಸ್.ಎಂ.ಸತೀಶ್, ಬಿ.ಟಿ.ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.