ADVERTISEMENT

ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಮತದಾನವೇ ಬುನಾದಿ: ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 14:12 IST
Last Updated 24 ಆಗಸ್ಟ್ 2019, 14:12 IST
ಶಿವಮೊಗ್ಗ ಕಸ್ತೂರಿಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಅನುಷ್ಠಾನ ಮತ್ತು ಮಾಹಿತಿ ಕಾರ್ಯಾಗಾರವನ್ನು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಉದ್ಘಾಟಿಸಿದರು.
ಶಿವಮೊಗ್ಗ ಕಸ್ತೂರಿಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಅನುಷ್ಠಾನ ಮತ್ತು ಮಾಹಿತಿ ಕಾರ್ಯಾಗಾರವನ್ನು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಉದ್ಘಾಟಿಸಿದರು.   

ಶಿವಮೊಗ್ಗ: ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಮತದಾನವೇ ಬುನಾದಿ. ಯುವ ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಕೋರಿದರು.

ಕಸ್ತೂರಿಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಸಂಘ, ಚುನಾವಣಾ ಜಾಗೃತಿ ಕ್ಲಬ್ ಆಯೋಜಿಸಿದ್ದ ಮತದಾನ ಅನುಷ್ಠಾನ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಬೇಕಿದೆ. 18 ವರ್ಷ ತುಂಬಿದವರೆಲ್ಲರೂ ಮತದಾನ ಮಾಡಲು ಅರ್ಹರು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆವರೆಗೂ ವಿವಿಧ ಹಂತಗಳಲ್ಲಿ ತಪ್ಪದೇ ಮತದಾನ ಮಾಡಬೇಕು.ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮತದಾನ ನಡೆಯಲು ಜಿಲ್ಲಾಡಳಿತ ಮೂಡಿಸಿದ ಜಾಗೃತಿಯೇ ಕಾರಣ. ಈಗ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗಾಗಿ ಜಿಲ್ಲಾಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅವರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಒಳ್ಳೆಯವರನ್ನು ಆಯ್ಕೆ ಮಾಡುವ ಹೊಣೆ ಮತದಾರರ ಮೇಲಿದೆ. ಅದರಲ್ಲೂ ಯುವಜನರ ಪಾತ್ರ ಬಹಳ ಮುಖ್ಯ. ಯಾರಿಗೂ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟಾ ಇರುತ್ತದೆ. ಈ ಅವಕಾಶವನ್ನೂ ಬಳಸಿಕೊಳ್ಳಬಹುದು ಎಂದರು.

ಜಿಲ್ಲಾ ನೋಡಲ್ ಅಧಿಕಾರಿ ಎಸ್.ಎಚ್.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಮದ್ ಇಮ್ತಿಯಾಜ್, ಸಂಪನ್ಮೂಲ ವ್ಯಕ್ತಿ ಬಿ.ವಿ.ಸೌಮ್ಯಾ, ಪ್ರಾಂಶುಪಾಲ ಟಿ.ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.