ADVERTISEMENT

ಜಿಲ್ಲೆಯ ಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 12:41 IST
Last Updated 23 ಡಿಸೆಂಬರ್ 2020, 12:41 IST
   

ಶಿವಮೊಗ್ಗ: ಗೋಪಾಳ ಕ್ರೀಡಾ ಸಮುಚ್ಛಯದಲ್ಲಿ ₹ 3.92 ಕೋಟಿ ವೆಚ್ಚದಲ್ಲಿ ಯೋಗ ಭವನ ನಿರ್ಮಾಣಕ್ಕೆ ಡಿ.28ರಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಶಂಕುಸ್ಥಾಪನೆ ನೆರವೇರಿಸುವರು. ಜಿಲ್ಲೆಯ ಶಾಲೆಗಳಲ್ಲಿ ಯೋಗ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

₹ 19.48 ಕೋಟಿ ವೆಚ್ಚದ ವಿವಿಧ ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ₹ 12.61 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸುವರು. ಹಾಗೆಯೇ, ನಗರ ಪಾಲಿಕೆಯ ₹ 19.53 ಕೋಟಿ ವೆಚ್ಚದ ಹಲವು ಯೋಜನೆಗಳನ್ನು ಉದ್ಘಾಟಿಸುವರು. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ₹ 105 ವೆಚ್ಚದ 137 ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ನಗರದ 45 ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲಾದ ಸ್ಮಾರ್ಟ್ ಎಜುಕೇಶನ್‌ ಸಿಸ್ಟಂ, ಮಾಸ್ತಾಂಬಿಕ ಪಾರ್ಕ್, ನಗರ ಪಾಲಿಕೆ ಪಾರದರ್ಶಕ ಆಡಳಿತಕ್ಕಾಗಿ ಅಭಿವೃದ್ಧಿಪಡಿಸಿದ ಉದ್ದಿಮೆ ಪರವಾನಗಿ, ಬಿಬಿಪಿಎಸ್ ತಂತ್ರಾಂಶಗಳನ್ನು ಉದ್ಘಾಟಿಸುವರು. ₹ 50 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಕಾಲೇಜಿಗೆ ಖರೀದಿಸಲಾದ ಉಪಕರಣಗಳು, ಕಸ ಸಂಗ್ರಹಣೆಗಾಗಿ ಖರೀದಿಸಿದ 51 ಆಟೊಟಿಪ್ಪರ್‌ಗಳನ್ನು ಹಸ್ತಾಂತರಿಸುವರು

ADVERTISEMENT

₹ 5.47 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್‌ನಿಲ್ದಾಣ ಸುಂದರೀಕರಣ, ₹ 72 ಲಕ್ಷದಲ್ಲಿ ಹೊಳೆಬಸ್ ನಿಲ್ದಾಣ ಕಾಮಗಾರಿ ಕಾಮಗಾರಿಗಳು ಯೋಜನೆಯಲ್ಲಿ ಸೇರಿವೆ ಎಂದರು.

ರೂಪಾಂತರಗೊಂಡ ಕೊರೊನಾ ವೈರಸ್ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಡಿ.24ರಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ನಗರದ ಸಂಚಾರಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ, ಮೇಯರ್ ಸುವರ್ಣಾ ಶಂಕರ್, ಸುನೀತ ಅಣ್ಣಪ್ಪ, ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.