ADVERTISEMENT

ಮಂಗನ ಕಾಯಿಲೆ: ಮೃತರ ಕುಟುಂಬಗಳಿಗೆ ₨ 10 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 14:20 IST
Last Updated 1 ಮಾರ್ಚ್ 2019, 14:20 IST

ಶಿವಮೊಗ್ಗ: ಮಂಗನ ಕಾಯಿಲೆಗೆ ಮೃತಪಟ್ಟ ಕುಟುಂಬಗಳಿಗೆ ತಲಾ ₨ 10 ಲಕ್ಷ ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ ಸುರಗಿಹಳ್ಳಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಲಸಿಕೆ ಲಭ್ಯವಿದೆ. ಪ್ರಸ್ತುತ 45 ಸಾವಿರ ಲಸಿಕೆ ಸಂಗ್ರಹಿಸಲಾಗಿದೆ. ಈ ತಿಂಗಳ ಅಂತ್ಯದ ಒಳಗಾಗಿ ಇನ್ನೂ 50 ಸಾವಿರ ಲಸಿಕೆ ಹಾಗೂ ಮುಂದಿನ ತಿಂಗಳು 55 ಸಾವಿರ ಲಸಿಕೆ ಬರಲಿದೆ. ಮುಂದಿನ ಮಳೆಗಾಲದ ಬಳಿಕ ಮಂಗನ ಕಾಯಿಲೆ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 176 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. 8 ಜನರು ಮಂಗನ ಕಾಯಿಲೆಯಿಂದಲೇ ಮೃತಪಟ್ಟಿರುವುದು ದೃಡಪಟ್ಟಿದೆ. 309 ಮಂಗಗಳು ಮೃತಪಟ್ಟಿರುವುದು ಪತ್ತೆಯಾಗಿದೆ. 109 ಉಣುಗುಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. 41 ಉಣುಗುಗಳಲ್ಲಿ ಕೆಎಫ್‌ಡಿ ವೈರಸ್ ಕಂಡು ಬಂದಿದೆ ಎಂದು ವಿವರ ನೀಡಿದರು.

ಮಾರ್ಚ್ ಒಳಗೆ ಅನುದಾನ ಬಳಕೆ:ಕೆಲವು ಇಲಾಖೆಗಳಲ್ಲಿ ಕಾರ್ಯಕ್ರಮಗಳ ಅನುಷ್ಠಾನ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಎಲ್ಲಾ ಇಲಾಖೆಗಳೂ ಮಾರ್ಚ್ ಒಳಗೆ ತಮಗೆ ಬಿಡುಗಡೆ ಮಾಡಿರುವ ಅನುದಾನ ವೆಚ್ಚ ಮಾಡಬೇಕು. ಅನುದಾನ ಲೋಪವಾದರೆ ಆಯಾ ಇಲಾಖಾ ಅಧಿಕಾರಿಗಳೇ ಹೊಣೆಗಾರರು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಶಿವರಾಮೇಗೌಡ ಎಚ್ಚರಿಸಿದರು.

ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಈ ವರ್ಷ 114 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಜನವರಿ ಕೊನೆಯವರೆಗೆ ಕೇವಲ ₨ 16ಕೋಟಿ ವೆಚ್ಚ ಮಾಡಲಾಗಿದೆ. ಎಪ್ರಿಲ್ ಮೊದಲ ವಾರದ ಒಳಗೆ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದರು.

ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ಈ ತಿಂಗಳ ಅಂತ್ಯದ ಒಳಗೆ ಅನುಷ್ಠಾನಗೊಳಿಸಬೇಕು. ಮುಂದಿನ ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನರಸಿಂಗ ನಾಯಕ್ ಕೆ.ಬಿ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.