ADVERTISEMENT

‘ವರ್ಗಾವಣೆ ಮಾಡಿ,ಕಾಯ್ದೆ ತಿದ್ದುಪಡಿ ತನ್ನಿ’

ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:17 IST
Last Updated 9 ನವೆಂಬರ್ 2018, 20:17 IST
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು –ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಮತ್ತು ವರ್ಗಾವಣೆ ಕಾಯ್ದೆಯಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿಯ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿಶುಕ್ರವಾರ ಧರಣಿ ನಡೆಸಿದರು.

‘ವರ್ಗಾವಣೆಯ ಕೌನ್ಸೆಲಿಂಗ್‌ ಈ ವರ್ಷವೇ ಮುಗಿಸಬೇಕು. ವರ್ಗಾವಣೆಗೊಂಡ ಶಿಕ್ಷಕರನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆಯಾ ಶಾಲೆಗಳಿಗೆ ನಿಯೋಜಿಸಬೇಕು. ಜತೆಗೆ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿನ ಅವೈಜ್ಞಾನಿಕ ನಿಯಮಗಳನ್ನು ಚಳಿ ಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಾಡಬೇಕು’ ಎಂದು ಶಿಕ್ಷಕರು ಒತ್ತಾಯಿಸಿದರು.

‘ಸದ್ಯ ಶೇ 20ರಷ್ಟು ಶಿಕ್ಷಕರ ಕೊರತೆ ಇರುವ ತಾಲ್ಲೂಕುಗಳನ್ನು ವರ್ಗಾವಣೆ ಪ್ರಕ್ರಿಯೆಯಿಂದ ಹೊರಗಿಡಬೇಕು ಹಾಗೂ ಹೈದರಾಬಾದ್‌ ಕರ್ನಾಟಕದಲ್ಲಿ ಕಡ್ಡಾಯವಾಗಿ 10 ವರ್ಷ ಸೇವೆ ಸಲ್ಲಿಸಬೇಕೆಂಬ ನಿಯಮಗಳಿವೆ. ಇವುಗಳನ್ನು ತಿದ್ದುಪಡಿ ಮಾಡಿ, ಎಲ್ಲ ತಾಲ್ಲೂಕುಗಳಲ್ಲಿನ ಶಿಕ್ಷಕರು ಮತ್ತುಹೈದರಬಾದ್‌ ಕರ್ನಾಟಕದಲ್ಲಿ 2015ಕ್ಕಿಂತ ಮುಂಚೆ ನೇಮಕಾತಿ ಹೊಂದಿರುವ ಶಿಕ್ಷಕರನ್ನೂ ವರ್ಗಾವಣೆಗೆ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈಗಾಗಲೇ ಆರು ಬಾರಿ ಕೌನ್ಸೆಲಿಂಗ್‌ ದಿನಾಂಕಗಳನ್ನು ಪ್ರಕಟಿಸಿ, ಮುಂದೂಡಲಾಗಿದೆ. ಈಗ ಮತ್ತೆ ಕೌನ್ಸೆಲಿಂಗ್‌ ಅನ್ನು ಮುಂದಿನ ಆದೇಶದ ವರೆಗೆ ತಡೆಹಿಡಿಯಲಾಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಶಿಕ್ಷಕರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ’ ಎಂದು ಸಮಿತಿಯ ಅಧ್ಯಕ್ಷಮಾಲತೇಶ ಬಬ್ಬಜ್ಜಿ ದೂಷಿಸಿದರು.

‘ಸೇವಾಜ್ಯೇಷ್ಠತೆ ಆಧರಿಸಿ ವರ್ಗಾವಣೆ ಮಾಡಬೇಕು. ಅಂತರ್‌ ಘಟಕದ ವರ್ಗಾವಣೆ ಪ್ರಮಾಣವನ್ನು ಶೇ 6ಕ್ಕೆ ಹೆಚ್ಚಿಸಬೇಕು. ಅಂತರ್‌ ಘಟಕದಲ್ಲಿ ಕನಿಷ್ಠ ಸೇವಾವಧಿ ಪೂರೈಸಿದ ಶಿಕ್ಷಕರಿಗೆ, ಮೂಲ ಜಿಲ್ಲೆಗೆ ವರ್ಗವಾಗಲು ಅವಕಾಶ ಮಾಡಿಕೊಡಬೇಕು. ಈಗಾಗಲೇ ಹೆಚ್ಚುವರಿಯಾದ ಹಿಂದಿ, ಇಂಗ್ಲಿಷ್‌, ದೈಹಿಕ ಶಿಕ್ಷಣ ವಿಷಯದ ಶಿಕ್ಷಕರಿಗೆ ನಿಯೋಜನಾ ಸ್ಥಳ ಸಿಗದಿರುವ ಕಾರಣ ಈಗಿರುವ ಶಾಲೆಗಳಲ್ಲಿ ಮುಂದುವರಿ ಸಲಾಗುತ್ತಿದೆ. ಅದರಂತೆ ಕನ್ನಡ ಶಿಕ್ಷಕರನ್ನೂ ಇರುವ ಶಾಲೆಗಳಲ್ಲಿ ಮುಂದುವರಿಸಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಶರಣಪ್ಪ ಮಟ್ಟೂರು, ಪುಟ್ಟಣ್ಣ, ವೈ.ಎ. ನಾರಾಯಣಸ್ವಾಮಿ, ಆಯನೂರು ಮಂಜುನಾಥ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ.ಜಾಫರ್‌ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಶಿಕ್ಷಕರ ಅಹವಾಲು ಆಲಿಸಿದರು. ಬೇಡಿಕೆಗಳನ್ನು ಮುಖ್ಯ ಮಂತ್ರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

**

‘ನಮ್ಮವರು ನಮ್ಮೊಟ್ಟಿಗೆ ಇದ್ದರೆ ಚಂದ’

‘ನನ್ನ ಪತ್ನಿ ಕೊಪ್ಪಳದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಹಾವೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳು ಅಜ್ಜಿಯ ಮನೆಯಲ್ಲಿದ್ದಾರೆ. ನಮ್ಮೊಟ್ಟಿಗೆ ನಮ್ಮವರು ಇಲ್ಲದಿದರೆ ತುಂಬಾ ಕಷ್ಟವಾಗುತ್ತದೆ. ಮಕ್ಕಳನ್ನು ನೋಡಿ ತುಂಬಾ ದಿನಗಳಾಗಿದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಂದರ್ಭದಲ್ಲಿ ಪತ್ನಿ ಜೊತೆಗಿಲ್ಲ ಎಂದರೆ ಹೇಗೆ? ಅದರಂತೆ ವಿಧವೆಯರು, ಅಂಗವಿಕಲ ಶಿಕ್ಷಕರು ಸಹ ನೋವು ಅನುಭವಿಸುತ್ತಿದ್ದಾರೆ’ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.