ADVERTISEMENT

ಅಂಗವಿಕಲರ ಕಣ್ಣೀರು ಒರೆಸದ ಅದಾಲತ್

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:10 IST
Last Updated 5 ಮೇ 2012, 5:10 IST

ಪಾವಗಡ: ಪಟ್ಟಣದ ಸರ್ಕಾರಿ ಶಾಲೆ ಆವಣದಲ್ಲಿ ಶುಕ್ರವಾರ ಅಂಗವಿಕಲರ ಕಲ್ಯಾಣ ಸಮಿತಿಯ ಅಯುಕ್ತ ಕೆ.ವಿ.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆದ ಅಂಗವಿಕಲರ ಮಾಸಾಶನ ಕುರಿತ ಅದಾಲತ್ ಕೇವಲ ಕಾಟಾಚಾರದ ಕಾರ್ಯಕ್ರಮವಾಗಿತ್ತು.

`ನಾನಿನ್ನೂ ಬದುಕಿದ್ದೇನೆ ಮಹಾಸ್ವಾಮಿ. ನಾನು ಸತ್ತು ಹೋಗಿದ್ದೀನಿ ಅಂತ 3 ವರ್ಷದಿಂದ ಪೆನ್ಷನ್ ನಿಲ್ಲಿಸಿದ್ದಾರೆ. ಮನೆಯಲ್ಲಿ ಎರಡು ಕುರುಡು ಹೆಣ್ಣು ಮಕ್ಕಳಿವೆ. ಜೀವನ ನಡೆಸೋದು ಕಷ್ಟ. ನ್ಯಾಯ ದೊರಕಿಸಿಕೊಡಿ~ ಎಂದು ನಾಗಲಮಡಿಕೆ ಗ್ರಾಮದ ಈರಮ್ಮ ಸುರಿಸಿದ ಕಣ್ಣೀರಿಗೆ ಆಯುಕ್ತರೂ ಸೇರಿ ದಂತೆ ಯಾರೊಬ್ಬರೂ ಕರಗಲಿಲ್ಲ.

`ಈ ಕುರಿತು ಕಂದಾಯ ಅಧಿಕಾರಿಗಳು ಪರಿಶೀಲಿ ಸಬೇಕು~ ಎಂದಷ್ಟೇ ಹೇಳಿ ಅದಾಲತ್ ನಡೆಸುತ್ತಿದ್ದ ಅಂಗವಿಕಲರ ಕಲ್ಯಾಣ ಸಮಿತಿಯ ಆಯುಕ್ತ ರಾಜಣ್ಣ ತಮ್ಮ ಮಾತು ಮುಂದುವರಿಸಿದರು.
`ಜೀವಂತ ವ್ಯಕ್ತಿ ಎದುರಿಗೇ ಇರುವಾಗ ಮಾಸಾ ಶನ ಕೊಡಿಸಲು ಇನ್ಯಾವ ಪುರಾವೆ ಒದಗಿಸಬೇಕು. ಇಂಥ ಕಾಟಾಚಾರದ ಕಾರ್ಯಕ್ರಮ ನಡೆಸು ವುದರಿಂದ ಯಾರಿಗೆ ತಾನೆ ಏನು ಪ್ರಯೋಜನ~ ಎಂದು ಸ್ಥಳದಲ್ಲಿದ್ದ ಅಂಗವಿಕಲರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 3 ವರ್ಷದಿಂದ ತಾಲ್ಲೂಕಿನಲ್ಲಿ ಅರ್ಹ ಅಂಗವಿಕಲರನ್ನು ಗುರುತಿಸುವಲ್ಲಿ ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅಂಗವಿಕಲರು ದೂರಿದರು. ತಾಲ್ಲೂಕಿನಲ್ಲಿರುವ ಒಟ್ಟು ಅಂಗವಿಕಲರ ನಿಖರ ಸಂಖ್ಯೆಯೇ ಇಲಾಖೆಯ ಬಳಿ ಇಲ್ಲ. ಇಲಾಖೆಯ ಬಳಿ ಇರುವ ಮಾಹಿತಿ ಪ್ರಕಾರ ಅಂಗವಿಕಲರ ಸಂಖ್ಯೆ 6000ದಿಂದ 3000ದ ನಡುವೆ ಹೊಯ್ದಾಡುತ್ತದೆ. ಇದೀಗ ತಾಲ್ಲೂಕಿನಲ್ಲಿ ಕೇವಲ 1800 ಅಂಗವಿಕಲರು ಮಾತ್ರ ಇದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಅಂಗವಿಕಲರು ದೂರಿದರು.

`ಮಾಸಶನ ಬಿಡುಗಡೆಗೆ ಮುನ್ನ ಸಮೀಕ್ಷೆಗೆ ಬರುವ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗರು ಮನೆಗೆ ಭೇಟಿ ನೀಡುವುದಿಲ್ಲ. ಹಾದಿಬೀದಿಯಲ್ಲಿ ಯಾರ‌್ಯಾರದೋ ಮಾತು ಕೇಳಿ ಸರ್ಕಾರಕ್ಕೆ ವರದಿ ರವಾನಿಸುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕು~ ಎಂದು ಸ್ಥಳದಲ್ಲಿದ್ದ ಅಂಗವಿಕಲರು ಆಗ್ರಹಿಸಿದರು.

`ಕಂದಾಯ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ತೆರಳುವ ಮೊದಲು ಟಾಂಟಾಂ ಹೊಡೆಸಬೇಕು. ಫಲಾನುಭವಿಯ ಮನೆಗೆ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಸಮಗ್ರ ಮಾಹಿತಿಯನ್ನು ಮರುಪರಿಶೀಲಿಸಿ ಸಿದ್ಧಪಡಿಸಿ. ಇದೇ ತಿಂಗಳ ಕೊನೆಯ ವಾರದಲ್ಲಿ ಭೇಟಿ ನೀಡಿದಾಗ ಪರಿಶೀಲಿಸು ತ್ತೇನೆ~ ಎಂದು ರಾಜಣ್ಣ ಸೂಚಿಸಿದರು.

ಖೊಟ್ಟಿ ಅಂಗವಿಕಲ ಪ್ರಮಾಣ ಪತ್ರ ನೀಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಅದಾಲತ್‌ನಲ್ಲಿ ಮಾಸಾಶನ ರದ್ದಾಗಿರುವ 1000ಕ್ಕೂ ಹೆಚ್ಚು ಅಂಗವಿಕಲರು ಪಾಲ್ಗೊಂಡಿದ್ದರು. ದೂರುದಾರರ ಸಂಖ್ಯೆ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಅಂಗವಿಕಲರಾದ ನಾಗಲಮಡಿಕೆ ಶ್ರೀನಿವಾಸ್, ಮುಂಗಾರುಬೆಟ್ಟದ ರತ್ನಮ್ಮ, ಕುಡುಬಕೆರೆ ವಿನೋದಮ್ಮ ಸೇರಿದಂತೆ ಹಲವರು ಅಳುತ್ತಲೇ ಮಾತನಾಡಿದರು.ಸ್ವಾಮಿ ವಿವೇಕಾನಂದ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಸುಧೀಂದ್ರ ಮಾತನಾಡಿ, 2011ನೇ ಸಾಲಿ ನಲ್ಲಿ ನಡೆದ ಪರಿಶೀಲನಾ ಕಾರ್ಯಕ್ರಮದ ಲೋಪ ಗಳಿಂದಾಗಿ ತಾಲ್ಲೂಕಿನ 1000ಕ್ಕೂ ಹೆಚ್ಚು ಅಂಗವಿಕಲರು ಬದುಕುವ ಹಕ್ಕನ್ನೇ ಕಳೆದು ಕೊಂಡಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿಗೆ ಕೂಡಲೇ ಅಗತ್ಯ ತರಬೇತಿ ನೀಡಿ ಪರಿಶೀಲನೆಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಸಿ.ಅನಿತಾ ಮಾತನಾಡಿ, ಕಂದಾಯ ಇಲಾಖೆ ತಪ್ಪಿನಿಂದಾಗಿ ಅಂಗವಿಕಲರು ನೋವು ಅನುಭವಿಸುತ್ತಿದ್ದಾರೆ. ತಪ್ಪನ್ನು ಇನ್ನು 20 ದಿನದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.

ತಹಶೀಲ್ದಾರ್ ಪ್ರಸನ್ನಕುಮಾರ್, ಅಂಗವಿಕಲ ಕಲ್ಯಾಣ ಸಮಿತಿ ಉಪಆಯುಕ್ತೆ ಮಾನಸಾದೇವಿ, ನಿರ್ದೇಶಕ ಗೋವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ರಾಮು, ಜಿಲ್ಲಾ ಅಂಗವಿಕಲ ಇಲಾಖೆ ಅಧಿಕಾರಿ ಆಂಜಿನಪ್ಪ, ಸಿಡಿಪಿಓ ಉಷಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.