ADVERTISEMENT

ಅಕ್ರಮ ನಡೆಸಿ ಸಿಕ್ಕಿ ಬಿದ್ದರೆ ವಿಡಿಯೋದಲ್ಲಿ ದಾಖಲು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 6:44 IST
Last Updated 19 ಮಾರ್ಚ್ 2014, 6:44 IST

ತುಮಕೂರು: ಚುನಾವಣಾ ಅಕ್ರಮ ನಡೆಸಿಯೂ ಸಾಕ್ಷ್ಯಗಳ ಕೊರತೆಯಿಂದ ತಪ್ಪಿಸಿಕೊಳ್ಳುತ್ತಿದ್ದವರಿಗೆ ಮೂಗುದಾರ ಹಾಕಲು ಮುಂದಾಗಿರುವ ಚುನಾ­ವಣಾ ಆಯೋಗ ಪ್ರಕರಣ ದಾಖಲಿಸಲು  ವಿಡಿಯೋ ಚಿತ್ರೀಕರಣ ಕಡ್ಡಾಯಗೊಳಿಸಿದೆ.

ಈ ಹಿಂದಿನ ಚುನಾವಣೆಗಳಲ್ಲಿ ವಿಡಿಯೋ ಚಿತ್ರೀಕರಣ ಇಲ್ಲದಿದ್ದರೂ ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ದೂರುಗಳನ್ನು ಚುನಾ­ವಣಾ ಸಿಬ್ಬಂದಿ ದಾಖಲಿಸ­ಬಹು­ದಾಗಿತ್ತು. ಆದರೆ ಸಾಕ್ಷ್ಯದ ಕೊರತೆ ಕಾರಣ ಈ ಪ್ರಕರಣಗಳಲ್ಲಿ ಆರೋಪಿ­ಗಳು ಸುಲಭವಾಗಿ ತಪ್ಪಿಸಿಕೊಳ್ಳು­ತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಯೋಗ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಿ­ಸಲು ವಿಡಿಯೋ ಚಿತ್ರೀಕರಣ ಕಡ್ಡಾಯ ಮಾಡಿದೆ. ಘಟನೆಯ ಸಂಪೂರ್ಣ ಚಿತ್ರೀಕರಣ ಮಾಡುವುದರಿಂದ ನ್ಯಾಯಾಲಯದಲ್ಲಿ ಆರೋಪಿಗಳು ಇನ್ನು ಮುಂದೆ ಸುಲಭವಾಗಿ ತಪ್ಪಿಸಿಕೊಳ್ಳ­ಲಾರರು ಎಂಬುದು ಚುನಾವಣಾ ಅಧಿಕಾರಿಗಳ ಬಲವಾದ ನಂಬಿಕೆ.

ಚುನಾವಣಾ ಅಕ್ರಮ ತಡೆಗಟ್ಟಲು ಪ್ಲೈಯಿಂಗ್‌ ತಂಡ ನೇಮಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ತಂಡದಲ್ಲಿ ಪಿಡಿಒಗಳನ್ನು ಮಾತ್ರ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಸಲ ಪಿಡಿಒ ಜತೆಗೆ ಚುನಾವಣಾ ಸಿಬ್ಬಂದಿ, ಇಬ್ಬರು, ಮೂವರು ಪೊಲೀಸರನ್ನು ನೇಮಕ ಮಾಡಲಾಗಿದೆ. ಎಲ್ಲ ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ಹಗಲು ರಾತ್ರಿ ಪಾಳಿ ಆಧಾರದಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರತಿ ಚೆಕ್‌ಪೋಸ್ಟ್ ನಲ್ಲೂ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅನೂಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ದೂರು ಬಂದಾಗ ಪರಿಶೀಲನೆಗೆ ಸ್ಥಳಕ್ಕೆ ಹೋಗುವ ಮುನ್ನ  ವಿಡಿಯೋ ಗ್ರಾಫರ್‌ಗಳನ್ನು ಕರೆದುಕೊಂಡು ಹೋಗುವಂತೆ ತನಿಖಾ ತಂಡಗಳಿಗೆ ಸೂಚಿಸಲಾಗಿದೆ. ವಿಡಿಯೋ ಗ್ರಾಫರ್‌ಗಳ ಕೊರತೆ ಇಲ್ಲ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.