ADVERTISEMENT

ಅಧಿಕಾರಿಗಳಲ್ಲಿ ಸಮನ್ವಯ ಕೊರತೆ: ಸಚಿವ ಪ್ರಸಾದ್

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:19 IST
Last Updated 5 ಸೆಪ್ಟೆಂಬರ್ 2013, 8:19 IST
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಭಾಗವಹಿಸಿದ್ದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಭಾಗವಹಿಸಿದ್ದರು.   

ತುಮಕೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಕೊರತೆ ಇದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ನೀಡಬೇಕು. ನೀರಿಗೆ ಹಣದ ಕೊರತೆ ಇದೆ ಎಂಬ ಕಾರಣ ಹೇಳುವಂತಿಲ್ಲ ಎಂದರು.

ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಬೆಸ್ಕಾಂ ನಿಗದಿತ ಅವಧಿಯಲ್ಲಿ ಸಂಪರ್ಕ ಕಲ್ಪಿಸುತ್ತಿಲ್ಲ. ಅಲ್ಲದೆ ಸಿಂಗಲ್‌ಫೇಸ್‌ನಲ್ಲಿ ಮೋಟಾರ್ ಚಾಲನೆ ಮಾಡಲು ಅಗತ್ಯವಿರುವ ಸಾಮಗ್ರಿ ಅಳವಡಿಸುತ್ತಿಲ್ಲ ಎಂದು ಜಿ.ಪಂ. ಅಧಿಕಾರಿಗಳು ದೂರಿದರು.

ಕುಡಿಯುವ ನೀರಿನ ಬೋರ್‌ವೆಲ್‌ಗಳಿಗೆ ತಕ್ಷಣ ಸಂಪರ್ಕ ಕಲ್ಪಿಸುವುದಾಗಿ ಬೆಸ್ಕಾಂ ಅಧಿಕಾರಿ ಹೇಳಿದರು. ಎರಡು ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಇದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿಳಂಬ ಧೋರಣೆ ಅನುಸರಿಸಿದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಎನ್‌ಆರ್‌ಇಜಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಜನರು ವಲಸೆ ಹೋಗದಂತೆ ಉದ್ಯೋಗವಕಾಶ ಕಲ್ಪಿಸಬೇಕು. ಬರ ಪರಿಸ್ಥಿತಿಯನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಬೇಕು. ಮೈತ್ರಿ ಮತ್ತು ಮನಸ್ವಿನಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಅವಿವಾಹಿತ ಮತ್ತು ವಿಚ್ಚೇದಿತ ಮಹಿಳೆಯರ ಅಂಕಿಅಂಶವನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದು, ಪಿಂಚಣಿ ನೀಡುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ರೂಪಿಸಲು ಕ್ರಮಕೈಗೊಳ್ಳಬೇಕು. ಪ್ರತಿ ಗ್ರಾಮದ ಕನಿಷ್ಠ 2 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ, ಪ್ರಸ್ತಾವ ಸಲ್ಲಿಸಿ. ಎಲ್ಲ ಸಮಾಜಗಳಿಗೂ ಸಹಕಾರಿಯಾಗುವಂತೆ ಸ್ಮಶಾನ ನಿರ್ಮಿಸಿ. ಆಶ್ರಯ ಯೋಜನೆಗೆ ಭೂಮಿ ಗುರುತಿಸಿ, ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲೆಯಲ್ಲಿ 655 ಗ್ರಾಮಗಳಲ್ಲಿ ಸ್ಮಶಾನ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಅಡಿಕೆ, ತೆಂಗು ಒಣಗಿದೆ. ಸತತ ಮೂರು ವರ್ಷದಿಂದ ಬರವಿದೆ. ಪ್ರತಿ ತಾಲ್ಲೂಕಿನಲ್ಲಿ 50ರಿಂದ 60 ಕೊಳವೆಬಾವಿ ಅಗತ್ಯ. ಜಿಲ್ಲೆಯನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ, ಅನುದಾನ ನೀಡಬೇಕೆಂದು ಕೋರಿದರು. ಅಧಿಕಾರಿಗಳು ದೀರ್ಘ ರಜೆಯ ಮೇಲೆ ತೆರಳಬಾರದು, ಕೇಂದ್ರ ಸ್ಥಾನದಲ್ಲಿರಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡಿ, ಜಿಲ್ಲೆಯ 50 ಹೋಬಳಿಗಳಲ್ಲಿ ಬರವಿದೆ. ಈ ತಿಂಗಳಲ್ಲಿ ಮಳೆ ಆಗದಿದ್ದರೆ ಗೋಶಾಲೆ ತೆರೆಯಬೇಕಾಗುತ್ತದೆ. ಸಮರ್ಪಕವಾಗಿ ಪಡಿತರ ವಿತರಣೆ ಮಾಡದ 15 ನ್ಯಾಯಬೆಲೆ ಅಂಗಡಿಗಳ ಅನುಮತಿ ಅಮಾನತು ಮಾಡಲಾಗಿದೆ. ಕೃಷಿಕರಿಗೆ 41.75 ಕೋಟಿ ಇನ್‌ಪುಟ್ ಸಬ್ಸಿಡಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಅಧ್ಯಕ್ಷರ ಪತಿಯೇ ಗುತ್ತಿಗೆದಾರ !
`ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಅವರ ಪತಿ ಮಹಾಲಿಂಗಪ್ಪ ಬೆಸ್ಕಾಂ ಗುತ್ತಿಗೆ ಪಡೆದಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಕುಡಿಯುವ ನೀರಿನ ಯೋಜನೆಗಳಿಗೆ ಸಮಸ್ಯೆಯಾಗುತ್ತಿದೆ. ಬೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು' ಎಂದು ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.

ನಗರದಲ್ಲಿ ಖಾಸಗಿ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದೆ ಯಾವುದೇ ಖಾಸಗಿ ಬಡಾವಣೆಗೆ ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರಾತಿ ನೀಡಬಾರದು ಎಂದು ಸಚಿವರು ಸೂಚಿಸಿದರು. ನಗರದ 38 ಬಡಾವಣೆಯ 210 ಎಕರೆ ಭೂಪರಿವರ್ತನೆಗೆ ಅರ್ಜಿ ಬಂದಿದೆ ಎಂದು ಟೂಡಾ ಆಯುಕ್ತರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.