ತುಮಕೂರು: ಅಧಿಕಾರಿಗಳು ಸಭೆಗೆ ಅನಗತ್ಯ ಅಂಕಿ- ಅಂಶ, ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು ರೈತರಿಗೆ ಉಪಯೋಗವಾಗುವಂತಹ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಎಲ್ಲ ಅಧಿಕಾರಿಗಳು ತಾವು ಕೆಲಸ ಮಾಡುವ ಕೇಂದ್ರ ಸ್ಥಾನದಲ್ಲಿ ವಾಸವಿರಬೇಕು. ಗೆಜೆಟೆಡ್ ಅಧಿಕಾರಿಗಳು ಸೇರಿದಂತೆ ಎಲ್ಲ ಸರ್ಕಾರಿ ನೌಕರರು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ಕಚೇರಿಯಲ್ಲಿರುವುದು ಕಡ್ಡಾಯ. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆ ಕೇವಲ ಗೊಬ್ಬರ, ಬೀಜ ಹಂಚಿಕೆ ಮಾಡುವುದಷ್ಟೆ ತಮ್ಮ ಕೆಲಸ ಎಂದು ತಿಳಿದಿದೆ. ಬರದ ಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಸಲಹೆ ನೀಡುತ್ತಿಲ್ಲ. ಕಡಿಮೆ ನೀರಿನಲ್ಲಿ ಬೆಳೆಯ ಬಹುದಾದ ಬದಲಿ ಬೆಳೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದು, ಪೌಷ್ಟಿಕಾಂಶವುಳ್ಳ ಸೋಯಬಿನ್ ಸೇರಿದಂತೆ ಅಕ್ಕಡಿ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿಲ್ಲ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಮಳೆಯಾಗಿದೆ. ಸಾಕಷ್ಟು ಬಿತ್ತನೆಯಾಗಿದೆ. ಬೀಜ- ಗೊಬ್ಬರದ ಸಮಸ್ಯೆ ಆಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಅನುಪ್ ಮಾಹಿತಿ ನೀಡಿದರು. ಆದರೆ ಈ ಮಾಹಿತಿಯನ್ನು ಒಪ್ಪದ ಸಚಿವರು, ರೈತರಿಗೆ ಇಲಾಖೆ ನೀಡಿರುವ ಮಾಹಿತಿ ಏನು? ಕಿರುಧಾನ್ಯ ಬೆಳೆಯಲು ಏಕೆ ಪ್ರೋತ್ಸಾಹ ನೀಡುತ್ತಿಲ್ಲ. ರೈತರು ಅಧಿಕಾರಿಗಳಿಗಿಂತ ಬುದ್ಧಿವಂತರು. ಆದರೆ ಮಾಹಿತಿ ಕೊಡುವ ಕೆಲಸವನ್ನಾದರೂ ಪ್ರಾಮಾಣಿಕವಾಗಿ ಮಾಡಬೇಕೆಂದು ತರಾಟೆಗೆ ತೆಗೆದುಕೊಂಡರು.
ನಫೆಡ್ ಕೇಂದ್ರ:
ಜಿಲ್ಲೆಯಲ್ಲಿ ತಕ್ಷಣ ನಫೆಡ್ ಕೇಂದ್ರಗಳನ್ನು ಆರಂಭಿಸಿ ಕೊಬ್ಬರಿ ಖರೀದಿ ಮಾಡಬೇಕು. ಖರೀದಿ ಮಾಡಿದ 2 ದಿನಗಳ ಒಳಗಾಗಿ ರೈತರಿಗೆ ಹಣ ನೀಡಬೇಕು. ಅಲ್ಲದೆ ನಫೆಡ್ ಕೇಂದ್ರಗಳಲ್ಲಿ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು. ಗ್ರಾಮಗಳಲ್ಲಿ ಕೊಬ್ಬರಿ ವ್ಯಾಪಾರಿಕ್ಕೆ ಅವಕಾಶ ನೀಡದೆ, ನೇರವಾಗಿ ನಫೆಡ್ ಕೇಂದ್ರದಲ್ಲಿ ಖರೀದಿ ಮಾಡಬೇಕು. ತಕ್ಷಣ ಹೂ ಮಾರಾಟ ಕೇಂದ್ರವನ್ನು ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರ ಬೆಂಬಲ ಬೆಲೆ ಘೋಷಿಸಿರುವ ಬೆಳೆಗಳ ಬೆಲೆ ಇಳಿದರೆ ತಕ್ಷಣ ಖರೀದಿ ಕೇಂದ್ರ ತೆರೆಯಬೇಕು. ಇದಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧ. ಮಳೆ ಕೈಕೊಟ್ಟರೆ ಗೋಶಾಲೆ ತೆರೆಯಬೇಕು. ಗೋಶಾಲೆ ತೆರೆಯುವುದನ್ನು ಕಂದಾಯ ಇಲಾಖೆಯಿಂದ ಪಶುಸಂಗೋಪನಾ ಇಲಾಖೆಗೆ ವಹಿಸಲು ಕ್ರಮಕೈಗ್ಳೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ನಾಶವಾಗಿರುವ ತೆಂಗು, ಅಡಿಕೆ ಬೆಳೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಸರ್ಕಾರದಿಂದ ಯಾವುದಾದರೂ ಯೋಜನೆಯಡಿ ನಷ್ಟ ಪರಿಹಾರ ನೀಡಲು ಪ್ರಸ್ತಾವ ಸಲ್ಲಿಸಬೇಕು. ಅಲ್ಲದೆ ಬದಲಿ ತೋಟಗಾರಿಕೆ ಬೆಳೆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ತೋಟಗಾರಿಕೆ ಬೆಳೆ ಬೆಳೆಯಲು ಹನಿ ನೀರಾವರಿಗೆ ನೀಡಬೇಕಾಗಿರುವ ಸಬ್ಸಿಡಿಯನ್ನು ತಕ್ಷಣ ಪಾವತಿಸಬೇಕೆಂದು ಉಪ ನಿರ್ದೇಶಕ ಬಿ.ಎನ್.ಪ್ರಸಾದ್‌ಗೆ ಸೂಚಿಸಿದರು.
ಮೀನುಗಾರಿಕೆ ಇಲಾಖೆ ನಿರ್ವಹಿಸುತ್ತಿರುವ ಕೆರೆಗಳಲ್ಲಿ ಮೀನು ಹಿಡಿಯುವ ಉಸ್ತುವಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಬೇಕು. ಮೀನು ಹಿಡಿಯುವುದು ಮಾಫಿಯಾವಾಗಿ ಬೆಳೆಯುತ್ತಿದ್ದು, ಮಾರುಕಟ್ಟೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿದೆ. ಲಾಭದ ದೃಷ್ಟಿಗಿಂತ ಗ್ರಾಮೀಣ ಜನರು ಸುಲಭವಾಗಿ ಮೀನು ಹಿಡಿಯಲು ಅನುಕೂಲವಾಗುವಂತೆ ಈ ಕೆಲಸ ಮಾಡಬೇಕೆಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.