ADVERTISEMENT

ಅಪರಿಚಿತರ ಮೇಲೆ ಅನುಮಾನ, ಹಲ್ಲೆ

ಮಕ್ಕಳ ಕಳ್ಳತನದ ಕುರಿತು ದಿನ ದಿನವೂ ಹಬ್ಬುತ್ತಿರುವ ಗಾಳಿ ಸುದ್ದಿ; ಪೊಲೀಸರಿಗೆ ತಲೆನೋವಾದ ಗ್ರಾಮಸ್ಥರ ನಡೆವಳಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 12:36 IST
Last Updated 20 ಮೇ 2018, 12:36 IST

ಪಾವಗಡ: ತಾಲ್ಲೂಕಿನಾದ್ಯಂತ ಮಕ್ಕಳನ್ನು ಅಪಹರಿಸುವ ವದಂತಿ ದಿನದಿಂದ ದಿನಕ್ಕೆ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಭಿಕ್ಷಾಟನೆ ನಡೆಸುವವರು, ಮಾನಸಿಕ ಅಸ್ವಸ್ಥರು, ಬೇರೆಡೆಯಿಂದ ಕೂಲಿಗೆ ಬಂದಿರುವ ಅಪರಿಚಿತರನ್ನು ಕಂಡ ಕೂಡಲೇ ಜನರು ಇವರೇ ಮಕ್ಕಳನ್ನು ಅಪಹರಿಸವ ತಂಡದವರು ಎಂದು ಹಿಡಿದು ಥಳಿಸುತ್ತಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪಟ್ಟಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಆತನನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿ ‘ಪಟ್ಟಣ ಠಾಣೆ ಪೊಲೀಸರು ಮಕ್ಕಳ ಕಳ್ಳರನ್ನು ಹಿಡಿದಿದ್ದಾರೆ’ ಎಂದು ಬರೆದು ಗೊಂದಲ ಸೃಷ್ಟಿಸಲಾಗಿತ್ತು.

ADVERTISEMENT

ಪಟ್ಟಣ ಪೊಲೀಸರು ಆತನನ್ನು ವಿಚಾರಣೆಗೆ ನಡೆಸಿದಾಗ ಆತ ಆಂಧ್ರದ ಕುಂದುರ್ಪಿ ಗ್ರಾಮದ ಮಾನಸಿಕ ಅಸ್ವಸ್ಥ ನಾಗೇಂದ್ರ ಎಂದು ತಿಳಿದು ಬಂದಿದೆ. ನಾಗೇಂದ್ರ ಅವರ ಸಂಬಂಧಿಕರು ಆತನನ್ನು ಠಾಣೆಯಿಂದ ಕರೆದೊಯ್ದಿದ್ದಾರೆ.

ಪಟ್ಟಣದ ಗುಟ್ಟಹಳ್ಳಿ ಬಳಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದ ಆಂಧ್ರದ ರೊದ್ದಂನ ರೈತ ಶೇರ್‌ಸಿಂಗ್ ಅವರನ್ನೂ ಸ್ಥಳೀಯರು ಹಿಡಿದು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದರು. ಆತನ ಪರಿಚಿತರು ಈತ ರೈತ, ಸ್ಥಳೀಯರ ಅನುಮಾನದಲ್ಲಿ ಹುರುಳಿಲ್ಲ ಎಂದು ಪೊಲೀಸರಿಗೆ ತಿಳಿಸಿ ಆತನ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದರು.

ಅರಸೀಕರೆ ಠಾಣಾ ವ್ಯಾಪ್ತಿಯಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆ. ಲಿಂಗದಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬನನ್ನು ಸ್ಥಳೀಯರು ಹಿಡಿದು ಥಳಿಸಿದ್ದರು. ಅರಸೀಕೆರೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆತ ಮಾನಸಿಕ ಅಸ್ವಸ್ಥ ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಪೆಮ್ಮನಹಳ್ಳಿಯ ಬೆಟ್ಟದ ಬಳಿ ಕತ್ತಾಳೆ ಕತ್ತರಿಸಲು ಬಂದಿದ್ದ ಕೂಲಿಕಾರ್ಮಿಕರನ್ನು ಅಪಹರಣಾಕಾರರು ಎಂದು ಭಾವಿಸಿ ಹತ್ತಾರು ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಆದರೆ, ಅವರು ಕಾರ್ಮಿಕರು ಎಂಬ ವಿಚಾರ ತಿಳಿದು ಅನಾಹುತ ತಪ್ಪಿತು.

ಅಪರಿಚತರನ್ನು ಅನುಮಾನಿಸುವ ಪ್ರಕರಣಗಳು ಹೆಚ್ಚುತ್ತಿವೆ. ನಿತ್ಯ ತಾಲ್ಲೂಕಿನ ಒಂದಿಲ್ಲೊಂದು ಗ್ರಾಮದಲ್ಲಿ ಮಕ್ಕಳನ್ನು ಅಪಹರಿಸುವವರು ಗ್ರಾಮಕ್ಕೆ ಬಂದಿದ್ದಾರೆ ಎಂಬ ವದಂತಿ ಹರಡುತ್ತಿದೆ. ಯಾರೂ ಇಲ್ಲದಿದ್ದರೂ ಗ್ರಾಮದವರೇ ಒಬ್ಬರ ಹಿಂದೆ ಒಬ್ಬರು ಗುಂಪು ಕಟ್ಟಿಕೊಂಡು ಓಡುತ್ತಿದ್ದಾರೆ. ಯಾವುದೇ ಅಪರಿಚಿತ ವಾಹನ ಗ್ರಾಮಕ್ಕೆ ಬಂದರೂ ಹಿಂಬಾಲಿಸಿ ತಡೆಯುವ ಯತ್ನಗಳು ಯುವಕರ ತಂಡದಿಂದ ನಡೆಯುತ್ತಿವೆ.

ಬೆಟ್ಟಗಳಲ್ಲಿ ಅಡಗಿದ್ದಾರೆ, ಬೆಟ್ಟದಿಂದ ಬೆಳಕು ಬರುತ್ತಿದೆ. ರಾತ್ರಿ ಶಬ್ಧ ಮಾಡುತ್ತಿದ್ದಾರೆ ಎಂಬಿತ್ಯಾದಿ ಸುಳ್ಳು ಸುದ್ದಿಗಳು ಗ್ರಾಮಸ್ಥರ ನಿದ್ದೆ ಕೆಡಿಸುತ್ತಿವೆ.

ತಾಲ್ಲೂಕಿನ ಅರಸೀಕೆರೆ, ತಿರುಮಣಿ, ವೈ.ಎನ್.ಹೊಸಕೋಟೆ ಠಾಣೆಗಳಿಗೆ ‘ಗ್ರಾಮಕ್ಕೆ ಅಪಹರಣಕಾರರು ಬಂದಿದ್ದಾರೆ ಬೇಗ ಬನ್ನಿ’ ಎಂದು ನಿತ್ಯ ನೂರಾರು ಕರೆಗಳು ಬರುತ್ತಿವೆ. ಇದು ಪೊಲೀಸ್ ಸಿಬ್ಬಂದಿಗೂ ತಲೆ ನೋವಾಗಿ ಪರಿಣಮಿಸಿದೆ.

4 ಠಾಣೆಗಳಲ್ಲೂ ಬೀಟ್ ಹೆಚ್ಚಿಸಲಾಗಿದೆ. ಬೀಟ್ ಸಿಬ್ಬಂದಿ ‘ಗ್ರಾಮಗಳಲ್ಲಿ ಯಾವುದೇ ಅಪಹರಣಕಾರರು ಬಂದಿಲ್ಲ, ಇದೆಲ್ಲ ವದಂತಿ. ಹೆದರಿಕೊಳ್ಳುವ ಅಗತ್ಯವಿಲ್ಲ’ ಎಂದು ಅರಿವು ಮೂಡಿಸುತ್ತಿದ್ದಾರೆ. ಆದರೂ, ತಾಲ್ಲೂಕು ಅಪಹರಣಕಾರರ ವದಂತಿಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಅಪಹರಣಕಾರರು ಎಂದು ಭಾವಿಸಿ ಯಾವಾಗ ಯಾರನ್ನು ಥಳಿಸುವರೋ ಎಂಬ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಕರೆಗಳ ಸಂಖ್ಯೆ ಕಡಿಮೆಯಾಗಿದೆ

ತಾಲ್ಲೂಕಿಗೆ ಯಾವುದೇ ಅಪಹರಣಕಾರರು ಬಂದಿಲ್ಲ ಎಂದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮಗಳಲ್ಲಿ ಬೀಟ್ ಹೆಚ್ಚಿಸಲಾಗಿದೆ. ವಾಟ್ಸ್‌ಅಪ್, ಫೇಸ್‌ಬುಕ್‌ನಲ್ಲಿ ಅಪಹರಣಕಾರರ ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಅಪಹರಣಕಾರರ ಕುರಿತು ಠಾಣೆಗಳಿಗೆ ಬರುತ್ತಿದ್ದ ಕರೆಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ತಿರುಮಣಿ ಠಾಣೆಯ ಪಿಎಸ್‌ಐ ಶ್ರೀಶೈಲಮೂರ್ತಿ.

**
ಕೂಲಿಗೆ ಬಂದಿದ್ದ ಕಾರ್ಮಿಕರ ಮೇಲೆ ಗ್ರಾಮಸ್ಥರು ಹಲ್ಲೆಗೆ ಮುಂದಾಗಿದ್ದರು. ಅವರು ಕತ್ತಾಳೆ ಕತ್ತರಿಸಲು ಬೆಟ್ಟಕ್ಕೆ ಬಂದಿದ್ದಾರೆ ಎಂಬ ವಿಚಾರ ತಿಳಿದ ನಂತರ ಸುಮ್ಮನಾದರು
– ಪಿ.ಜಿ. ಶ್ರೀನಾಥ್, ಪೆಮ್ಮನಹಳ್ಳಿ

ವದಂತಿ ಹಬ್ಬಿಸುವವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಜಾಲತಾಣಗಳಲ್ಲಿ ಚಿತ್ರಗಳನ್ನು ಹಾಕಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು
– ನಾಗೇಂದ್ರ, ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.