ADVERTISEMENT

ಅಸ್ಮಿತೆ ನೀಡಿದ ನಟನೆ

ದೇಸಿ ಸಾಧಕರು

ಜಿ.ಧನಂಜಯ
Published 26 ಅಕ್ಟೋಬರ್ 2013, 6:04 IST
Last Updated 26 ಅಕ್ಟೋಬರ್ 2013, 6:04 IST

ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿ ರಂಗಭೂಮಿ ನಟನೆ ಮತ್ತು ನಿರ್ದೇಶನ. ಇದುವರೆಗೆ 109 ಪ್ರದರ್ಶನ ನಿರ್ದೇಶಿಸಿರುವ ಹೆಗ್ಗಳಿಕೆ ಇದೆ. ತಮ್ಮ ಶಿಷ್ಯ ವೃಂದದಲ್ಲಿ ಎಸ್.ಎಸ್ ಎಂದೇ ಹೆಸರು ಪಡೆದವರು ಎಸ್.ಶಾಂತರಾಜಯ್ಯ.

ತಿಪಟೂರು ತಾಲ್ಲೂಕು ಜಕ್ಕನಹಳ್ಳಿ‌ಯಲ್ಲಿ 1954ರಲ್ಲಿ ಹುಟ್ಟಿದ್ದು. ತಂದೆ ಶಿವಲಿಂಗಪ್ಪ, ತಾಯಿ ಶಿವಮ್ಮ. ತಂದೆ ಹಾರ್ಮೋನಿಯಂ ಮಾಸ್ತರು. ‘ನನ್ನಂಗೆ ಪೆಟ್ಟಿಗೆ ಹೊತ್ಕಂಡ್ ಊರೂರು ಅಲೀಬ್ಯಾಡ. ಈ ನಾಟ್ಕಗೀಟ್ಕ ಎಲ್ಲ ನನ್ ತಲೀಗೇ ಮುಗ್ದೋಗ್ಲಿ’ ಇದು ಮಗನಿಗೆ ಅಪ್ಪ ನೀಡಿದ್ದ ಸಲಹೆ.

ಅಪ್ಪ ತನ್ನ ಮಗನನ್ನು ರಂಗಭೂಮಿಯಿಂದ ದೂರ ಇಟ್ಟರೂ, ಶಾಂತರಾಜಯ್ಯ ಅವರನ್ನು ನಾಟಕದ ಗೀಳು ಬಿಡಲಿಲ್ಲ. ಕದ್ದು ಮುಚ್ಚಿ ಹಾರ್ಮೋನಿಯಂ ಮಾಸ್ಟರ್ ನಂಜಪ್ಪನವರ ಗರಡಿಯಲ್ಲಿ ಕೈ ಪಳಗಿತು. ಶಾಸ್ತ್ರೀಯವಾಗಿ ಅಭ್ಯಾಸ ನಡೆಸದಿದ್ದರೂ, ನಿರ್ದೇಶಕರಾಗಿ ರೂಪಗೊಳ್ಳಲು ಸಹಕಾರಿಯಾಯಿತು. ನಟನೆಯಂತೂ ಗೀಳಾಗಿ ಉಳಿದಿತ್ತು.

ಸಹಕಾರಿ ತತ್ವದ ಆಧಾರದ ಮೇಲೆ ಸುತ್ತಲಿನ ಹಳ್ಳಿ ಮುಖಂಡರು ಸೇರಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಬೆಳಗುಲಿಯಲ್ಲಿ 1974ರಲ್ಲಿ ರಂಗನಾಥ ಗ್ರಾಮಾಂತರ ವಿದ್ಯಾ ಸಂಸ್ಥೆ ಪ್ರಾರಂಭಿಸಿದಾಗ ಶಾಲೆ ಗುಮಾಸ್ತರಾಗಿ ಸೆರ್ಪಡೆಯಾದರು. ವೃತ್ತಿ ಮತ್ತು ಪ್ರವೃತ್ತಿ ಬದುಕು ಒಟ್ಟಿಗೆ ಪ್ರಾರಂಭವಾದವು.ಗುಮಾಸ್ತರಾಗಿದ್ದು ಬಿಇಡಿ ಪರೀಕ್ಷೆ ಪಾಸು ಮಾಡಿ ಹಿಂದಿ ಭಾಷಾ ಶಿಕ್ಷಕರಾಗಿ ಬಡ್ತಿ ಪಡೆದರು. ಜತೆಗೆ ಶಾಲೆಯ ಶಿಕ್ಷಕರನ್ನೇ ಸೇರಿಸಿಕೊಂಡು ಗಂಡನ ಮನೆ ಸಾಮಾಜಿಕ ನಾಟಕ ನಿರ್ದೇಶಿಸಿ ಬೆಳಗುಲಿಯಲ್ಲಿ ಮೊದಲ ಪ್ರದರ್ಶನ ಮಾಡಿದರು. ಅಂದು ಪ್ರಾರಂಭವಾದ ಕಲಾ ಕೈಂಕರ್ಯ 59 ವರ್ಷ ಪ್ರಾಯದಲ್ಲೂ ನಿರಂತರವಾಗಿ ಮುಂದುವರಿದಿದೆ. 71 ದೊಡ್ಡ ಮತ್ತು 38 ಮಕ್ಕಳ ನಾಟಕ ಪ್ರದರ್ಶನ ನಿರ್ದೇಶಿ­ಸಿದ್ದಾರೆ. ಅಲ್ಲದೆ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ.

ಶಾಂತರಾಜಯ್ಯ ನಿರ್ದೇಶನದಲ್ಲಿ ಕುರುಕ್ಷೇತ್ರ, ದಾನ ಶೂರ ಕರ್ಣ, ಎಚ್.ಎಂ.ನಾಯ್ಕ, ದೇವದಾಸಿ, ಗಂಡನ ಮನೆ, ಗೌರಿ ಗೆದ್ದಳು, ದೀಪಾವಳಿ, ಮಹಾತ್ಯಾಗಿ, ಬಸ್ ಕಂಡಕ್ಟರ್ ಮುಂತಾದ 20ಕ್ಕೂ ಹೆಚ್ಚು ನಾಟಕಗಳು ಪ್ರದರ್ಶನ ಕಂಡಿವೆ. ನಟನೆ, ನಿರ್ದೇಶನ ಅಲ್ಲದೆ ಶಿಕ್ಷಕರಾಗಿಯೂ ಹೆಸರು ಪಡೆದಿದ್ದಾರೆ. ಕೆಲಸ ಮಾಡುವ ಊರಿನಲ್ಲೇ ಬದುಕು. ಭಾನುವಾರ ಮಾತ್ರ ಸ್ವಂತ ಊರಿಗೆ ಹೋಗುವುದು. ಸದಾ ಶಾಲೆ, ಮಕ್ಕಳು ಎಂದು ಯೋಚಿಸುವ ಅವರು, ಹತ್ತಾರು ವರ್ಷ ಹಿಂದಿನ ಹಳೆ ವಿದ್ಯಾರ್ಥಿ ಎದುರಿಗೆ ಬಂದರೂ ಹೆಸರಿಡಿದು ಮಾತನಾಡಿಸುವಷ್ಟು ಜ್ಞಾಪಕ ಶಕ್ತಿ ಕಾಯ್ದುಕೊಂಡಿದ್ದಾರೆ.

ರಾತ್ರಿ ವೇಳೆ ಹಳ್ಳಿಗಳಿಗೆ ತೆರಳಿ ವಿದ್ಯಾರ್ಥಿಗಳ ಓದನ್ನು ಖಾತ್ರಿ ಪಡಿಸಿಕೊಂಡು ಕೊಠಡಿಗೆ ಮರಳುತ್ತಾರೆ.  ಇದು ವಿದ್ಯಾರ್ಥಿಗಳ, ಪೋಷಕರ ಸಾಮಾಜಿಕ ಸ್ಥಿತಿಗತಿ ತಿಳಿದುಕೊಳ್ಳಲು ಸಹಕಾರಿ ಎಂಬುದು ಅವರ ಅನುಭವದ ಮಾತು.

ಪ್ರಯೋಗಶೀಲತೆಗೆ ತೆರೆದುಕೊಳ್ಳದೆ ಹಿಂದಿನಿಂದ ಕಲಿತ ನಾಟಕ ಕಲೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಹಳ್ಳಿಗರಿಗೆ ದಾಟಿಸುತ್ತ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ತೂಗಿಸಿಕೊಂಡಿದ್ದಾರೆ.

‘ಮುಂದಿನ ವರ್ಷ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಆಗುತ್ತೇನೆ. ಪ್ರವೃತ್ತಿಯಿಂದ ನಿವೃತ್ತಿಯ ಮಾತಿಲ್ಲ.  ನಶಿಸಿ ಹೋಗುತ್ತಿರುವ ಸಾಂಪ್ರದಾಯಿಕ ನಾಟಕ ಕಲೆಯನ್ನು ಉಳಿಸುವುದು ನನ್ನ ಕೆಲಸ’ ಎನ್ನುತ್ತಾರೆ.ಸಾಧನೆಯನ್ನು ಗುರುತಿಸಿ ಹಲವಾರು ಸ್ಥಳೀಯ ಸಂಘ– ಸಂಸ್ಥೆಗಳು ಸನ್ಮಾನಿಸಿವೆ. ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT