ADVERTISEMENT

ಇಂದಿನಿಂದ ಕೊಕ್ಕೊ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 9:38 IST
Last Updated 22 ಡಿಸೆಂಬರ್ 2012, 9:38 IST

ತಿಪಟೂರು: ಕರ್ನಾಟಕ ರಾಜ್ಯ ಕೊಕ್ಕೊ ಸಂಸ್ಥೆ ಹಾಗೂ ತಿಪಟೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡಿ.22ರಿಂದ 25ರವರೆಗೆ ನಗರದ ಕಲ್ಪತರು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ನಡೆಯಲಿದೆ ಸ್ಲೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಲೋಕೇಶ್ವರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಬೆಟ್ಟೇಗೌಡ ಮತ್ತು ಹಿರಿಯ ಕ್ರೀಡಾಪಟು ಟಿ.ಸಿ.ಆನಂದ್ ಕುಮಾರ್ ಸ್ಮರಣಾರ್ಥ ಈ ಬಾರಿ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಕೊಕ್ಕೊ ಪಂದ್ಯಾವಳಿ ನಡೆಯಲಿದೆ. ಪುರುಷರ 28, ಮಹಿಳೆಯರ 12 ತಂಡ ಭಾಗವಹಿಸಲಿವೆ. ವಿಜೇತ ತಂಡಗಳಿಗೆ ಒಟ್ಟು ರೂ 1.25 ಲಕ್ಷ ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು.

ಲೀಗ್ ಮತ್ತು ನಾಕೌಟ್ ಹಂತ ಸೇರಿದಂತೆ ನೂರಕ್ಕೂ ಹೆಚ್ಚು ಪಂದ್ಯ ನಡೆಯಲಿವೆ. ನಿತ್ಯ ಸಂಜೆ ಖ್ಯಾತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಹಿಳೆ ಮತ್ತು ಪುರುಷ ವೀಕ್ಷಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಡಿ.22ರಂದು ಮಧ್ಯಾಹ್ನ 12ಕ್ಕೆ ಕೆಂಪಮ್ಮ ದೇಗುಲದಿಂದ ಆರಂಭವಾಗುವ ಕ್ರೀಡಾಪಟುಗಳ ಮೆರವಣಿಗೆಯನ್ನು ಚಲನಚಿತ್ರ ನಟ ದರ್ಶನ್ ತೂಗುದೀಪ್ ಉದ್ಘಾಟಿಸುವರು. ಶಾಸಕರಾದ ಬಿ.ಸಿ.ನಾಗೇಶ್ ಅಧ್ಯಕ್ಷತೆ ವಹಿಸುವರು. ಸಂಜೆ 7ಕ್ಕೆ ಕ್ರೀಡಾಕೂಟವನ್ನು ನಟ ನಗರ ಕಿಟ್ಟಿ ಉದ್ಘಾಟಿಸುವರು. ವಿವಿಧ ಜನಪ್ರತಿನಿಧಿನಿಗಳು, ಅಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಳ್ಳುವರು. ಡಿ.25ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮಾನ ವಿತರಿಸುವರು ಎಂದು ತಿಳಿಸಿದರು.

ಕ್ಲಬ್‌ನ ಕಾರ್ಯಾಧ್ಯಕ್ಷ ಶಿವಪ್ರಸಾದ್, ಕಾರ್ಯದರ್ಶಿ ವೆಂಕಟಾಚಲಪತಿ,  ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.