ADVERTISEMENT

ಇಂದಿರಾ ಕ್ಯಾಂಟೀನ್‌ಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 9:15 IST
Last Updated 25 ನವೆಂಬರ್ 2017, 9:15 IST

ತುಮಕೂರು: ತುಮಕೂರು ಮಹಾನಗರ ಪಾಲಿಕೆಯು ನಗರದ ವಿವಿಧ ಕಡೆ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸ್ಥಳಗಳನ್ನು ಗುರುತಿಸಿ ಸರ್ಕಾರಕ್ಕೆ ಪಟ್ಟಿ ಕಳುಹಿಸಿದೆ. ಈ ಪಟ್ಟಿಯಲ್ಲಿ ಕ್ಯಾತ್ಸಂದ್ರದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 30X40 ಜಾಗ ಸಹ ಗುರುತಿಸಲಾಗಿದೆ ಎಂದು ತಿಳಿದಿದೆ.

’ಕ್ಯಾತ್ಸಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಉದ್ದೇಶ ಒಳ್ಳೆಯದೇ ಆಗಿದ್ದರೂ ಶಾಲಾ ಆವರಣದಲ್ಲಿ ಸ್ಥಾಪನೆ ಮಾಡಬಾರದು. ಬೇರೆ ಜಾಗ ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ಗ್ರಾಮಸ್ಥರ ಬೆಂಬಲವೂ ಸಿಗುತ್ತದೆ’ ಎಂದು ಕ್ಯಾತ್ಸಂದ್ರದ ಹರೀಶ್  ಹೇಳಿದರು.

’ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಅಂದಾಜು 2 ಎಕರೆಯಷ್ಟಿದೆ. ಮಕ್ಕಳಿಗೆ ಆಟ ಆಡಲು ಅನುಕೂಲವಾಗಿದೆ.  ಕ್ಯಾಂಟೀನ್‌ ಆರಂಭಗೊಂಡರೆ ಕಲಿಕೆಗೆ, ಆಟೋಟಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಪಾಲಿಕೆ ಬೇರೆ ಕಡೆಗೆ ಜಾಗ ಗುರುತಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

’ಈ ಹಿಂದೆಯೂ ಸರ್ಕಾರಿ ಶಾಲೆ ಆವರಣದ ಜಾಗವನ್ನು ಬೇರೆ ಬೇರೆ ಉದ್ದೇಶದ ಹೆಸರಿನಲ್ಲಿ ಕಬಳಿಸುವ ಪ್ರಯತ್ನ ನಡೆದಿತ್ತು. ಆಗಲೂ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರಿಂದ ಶಾಲೆ ಆವರಣ ಉಳಿದಿದೆ. ಈಗ ಪುನಾ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಜಾಗ  ಕಬಳಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.

‘ಶಾಲಾ ಮುಖ್ಯ ಶಿಕ್ಷಕರಿಗೆ ಈ ಸಂಗತಿ ಗೊತ್ತಿದ್ದರೂ ಅಸಹಾಯಕರಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು ಈ ಬಗ್ಗೆ ಪರಿಶೀಲನೆ ನಡೆಸಿ ಶಾಲೆ ಜಾಗ ಸಂರಕ್ಷಣೆಗೆ ಮುಂದಾಗಬೇಕು. ವಾರ್ಡ್ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.