ADVERTISEMENT

ಇಒ ವಿರುದ್ಧ ಸದಸ್ಯರ ದೂರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 9:10 IST
Last Updated 21 ಫೆಬ್ರುವರಿ 2012, 9:10 IST

ಚಿಕ್ಕನಾಯಕನಹಳ್ಳಿ: ನಗರದ ಮುಖ್ಯರಸ್ತೆ ಬದಿಯಲ್ಲಿರುವ ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗವನ್ನು ಅಳತೆ ಮಾಡದ ಕಾರಣ ಅನ್ಯರ ಪಾಲಾಗುವಂತೆ ಮಾಡುವಲ್ಲಿ ಕಾರ್ಯ ನಿರ್ವಹಣಾಧಿಕಾರಿ ಕೈವಾಡ ಅಡಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ದೂರಿದ್ದಾರೆ.

ಈ ಕುರಿತು ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರಂಜನಮೂರ್ತಿ, ಎಚ್.ಆರ್.ಶಶಿಧರ್ ಹಾಗೂ ಜಯಣ್ಣ ಪತ್ರಿಕಾ ಹೇಳಿಕೆ ನೀಡಿ, ನಗರದಲ್ಲಿರುವ ತಾಲ್ಲೂಕು ಪಂಚಾಯಿತಿಗೆ ಸೇರಿದ ಸ್ವತ್ತಿನ ಅಳತೆ ಮಾಡುವ ಬಗ್ಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಎರಡು ತಿಂಗಳಾದರೂ ಈವರೆಗೂ ಭೂಮಾಪನ ಇಲಾಖೆಯಿಂದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಾಗಲೆ ತಾಲ್ಲೂಕು ಪಂಚಾಯಿತಿಗೆ ಸೇರಿದ ಕನ್ನಡ ವೇದಿಕೆ ಬಳಿ ಕಾಮಗಾರಿ ನಡೆಸಲಾಗುತ್ತಿದ್ದು ಈ ಜಾಗದ ಅಳತೆಯಾಗುವವರೆಗೂ ಕಾಮಗಾರಿಗೆ ತಡೆ ನೀಡುವಂತೆ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದ್ದರೂ ಈವರೆಗೂ ಯಾವುದೇ ನೋಟಿಸ್ ಜಾರಿ ಮಾಡದೆ ನಿರ್ಲಕ್ಷ್ಯಿಸಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ.

ಈಗಲಾದರೂ ಕಾಮಗಾರಿ ನಿಲ್ಲಿಸಲು ಕ್ರಮ ಕೈಗೊಳ್ಳದಿದ್ದರೆ ಪಂಚಾಯಿತಿಗೆ ಸೆರಿದ ಸ್ವತ್ತನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಪಿಡಿಒ ಮೇಲೆ ದೂರು: ತಾಲ್ಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಮದ್ಯಪಾನ ಮಾಡಿಯೇ ಬರುತ್ತಾರೆ. ಇವರು ಶೇ.15ರಷ್ಟು ಲಂಚ ಪಡೆದು ಒಬ್ಬ ವ್ಯಕ್ತಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ 15ಲಕ್ಷದ ಕಾಮಗಾರಿ ಮಂಜೂರು ಮಾಡಿದ್ದು, ಇವರೊಂದಿಗೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯೂ ಕೈಜೋಡಿಸಿರುವುದರಿಂದ ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರಂಜನ್, ಎಚ್.ಆರ್.ಶಶಿಧರ್ ಹಾಗೂ ಜಯಣ್ಣ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.