ADVERTISEMENT

ಇಲ್ಲಿವೆ ಮಾದರಿ ಶಾಲೆಗಳು....

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:20 IST
Last Updated 5 ಫೆಬ್ರುವರಿ 2011, 7:20 IST

ತುಮಕೂರು:  ಈ ಶಾಲೆಯ ನೆನಪುಗಳನ್ನು ಕೆದಕಿದರೆ ಹಳೇ ವಿದ್ಯಾರ್ಥಿಗಳ ಹತ್ತು ಹಲವು ಸಾಧನೆಯ ಮೈಲಿಗಲ್ಲು, ಸವಿ ನೆನಪುಗಳು ಗರಿಬಿಚ್ಚ ತೊಡಗುತ್ತವೆ.ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಹಲವರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಗಳಿಸಿದ್ದಾರೆ. ಅವರಲ್ಲಿ ಡಾ.ನಟರಾಜ್, ಡಾ.ಶಿವರಾಜ್, ಜರ್ಮನಿಯಲ್ಲಿ ಉಪನ್ಯಾಸಕರ ವೃತ್ತಿಯಲ್ಲಿರುವ ಅಶ್ವಿನಿ. ಇಂತಹ ನೂರಾರು ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ತಂದಿದ್ದಾರೆ. ಶಿರಾಗೇಟ್ ಸಮೀಪ ಇರುವ ಈ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿದ್ದು 1935ರಲ್ಲಿ.

ಶಾಲೆ ನೋಡಲು ಈಗಲೂ ಸೊಗಸು.ಎತ್ತ ದೃಷ್ಟಿ ಹಾಯಿಸಿದರೂ ಕಣ್ಣಿಗೆ ಮಹಾನ್ ಕವಿಗಳ, ಇತಿಹಾಸ ಪುರುಷರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಷ್ಟೇ ಅಲ್ಲದೆ ಕನ್ನಡದ ಇತರ ಪ್ರಮುಖ ಸಾಹಿತಿಗಳ, ಋಷಿಮುನಿಗಳ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಇನ್ನೊಂದೆಡೆ ಸುಂದರ ಕ್ರೀಡಾಂಗಣ ‘ಆಟ ಆಡೋಣ ಬಾರಾ’ ಎಂದು ಮೈದಾನಕ್ಕೆ ಕರೆಯುತ್ತದೆ.

ಹಲವು ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಗೆ ಇಳಿಯುತ್ತಿರುವಾಗ, ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 430. 12 ಶಿಕ್ಷಕರು, 13 ಸುಸಜ್ಜಿತ ಕೊಠಡಿಗಳಿವೆ. ಇಲ್ಲಿಯ ಮಕ್ಕಳ ಇಂಗ್ಲಿಷ್ ಕಲಿಕೆ ಕೂಡಾ ಉತ್ತಮವಾಗಿದೆ. ಇದರ ಜತೆಯಲ್ಲಿ ಮಕ್ಕಳಿಗೆ ವಾರದಲ್ಲಿ ಒಮ್ಮೆ ಕಂಪ್ಯೂಟರ್ ತರಗತಿ ನಡೆಯುತ್ತದೆ.ಆತ್ಮವಿಶ್ವಾಸದಿಂದ ಕಂಪ್ಯೂಟರ್ ಬಟನ್ ಒತ್ತುವುದು, ಮೌಸ್ ಹಿಡಿದು ‘ಸರ್, ಯಾವ್ ಪ್ರೋಗ್ರಾಂ ಕಲಿಯೋಣ ಇವತ್ತು’ ಎಂದು ಕೇಳುವುದು ಪ್ರತಿಯೊಬ್ಬರನ್ನು ಚಕಿತಗೊಳಿಸುತ್ತದೆ.

ದೇವರಾಯಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ಇಂಥದೇ ಮಾದರಿ ಶಾಲೆಯಾಗಿದೆ.ಆಕರ್ಷಕ ಕಟ್ಟಡ ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿಯಂತಿದೆ. ಒಂದು ಎಕರೆಯಷ್ಟು ಪ್ರದೇಶದಲ್ಲಿ ಕಾಂಪೌಂಡ್ ನಡುವೆ ಸಾಕಷ್ಟು ಸೌಲಭ್ಯವನ್ನು ಒಳಗೊಂಡಿದೆ.ನೆಲ ಅಂತಸ್ತಿನಲ್ಲಿ ನಾಲ್ಕು ಕೊಠಡಿ, ಮೊದಲನೇ ಅಂತಸ್ತಿನಲ್ಲಿ ನಾಲ್ಕು ಕೊಠಡಿಗಳಿಂದ ಕೂಡಿರುವ ಶಾಲಾ ಕಟ್ಟಡ ಧ್ವಜಸ್ತಂಭ, ಕುಡಿಯುವ ನೀರಿನ ಟ್ಯಾಂಕ್, ಬಿಸಿ ಊಟದ ಸಿದ್ಧತೆಗೆ ಪ್ರತ್ಯೇಕ ಅಡುಗೆ ಕೋಣೆ, ಶೌಚಾಲಯದ ಸೌಲಭ್ಯ ಇದೆ. ಶಾಲಾ ಆವರಣದಲ್ಲೇ ಹಳೆ ಕೊಠಡಿಯೊಂದನ್ನು ಗ್ರಂಥಾಲಯಕ್ಕೆ ನವೀಕರಿಸಲಾಗಿದೆ.

ಈ ಹಿಂದಿನ ಸಂಸದರ ನಿಧಿ, ಸರ್ವ ಶಿಕ್ಷಣ ಅಭಿಯಾನ, ಮಾಜಿ ನಗರ ಸದಸ್ಯರೊಬ್ಬರ ಸಹಾಯಧನ, ಜಿಲ್ಲಾ ಪಂಚಾಯತ್, 12ನೇ ಹಣಕಾಸು ನಿಧಿ, ಪಾಲಿಕೆಯ ಶೇ. 18ರ ನಿಧಿ ಯೋಜನೆಯಡಿ ಶಾಲೆಗೆ ಹಣಕಾಸಿನ ನೆರವು ಹರಿದುಬಂದಿದೆ.ಒಟ್ಟು ರೂ. 20 ಲಕ್ಷ ಶಾಲೆ ಅಭಿವೃದ್ಧಿಗೆ ವಿನಿಯೋಗವಾಗಿದೆ. ಜತೆಗೆ ಸರ್ಕಾರೇತರ ಸಂಸ್ಥೆಯಾದ ತುಮಕೂರು ರೌಂಡ್ ಟೇಬಲ್ ಸಂಸ್ಥೆ ಸಹ ಒಂದು ಕೊಠಡಿ ನಿರ್ಮಿಸಿಕೊಟ್ಟಿದೆ.

ದೇವರಾಯಪಟ್ಟಣ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದರೂ ಸಂಪೂರ್ಣ ಗ್ರಾಮೀಣ ಪರಿಸರದಿಂದ ಕೂಡಿದೆ.ಒಂದರಿಂದ ಏಳನೇ ತರಗತಿಯವರೆಗೆ 160 ಮಕ್ಕಳು ಕಲಿಯುತ್ತಿದ್ದಾರೆ. ಮುಖ್ಯೋಪಾಧ್ಯಾ ಯರು ಸೇರಿದಂತೆ ಒಟ್ಟು 7 ಮಂದಿ ಶಿಕ್ಷಕರು ಇದ್ದಾರೆ.ಈ ರೀತಿ ಜಿಲ್ಲೆಯಲ್ಲಿ ಹಲವು ಮಾದರಿ ಶಾಲೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ನಾಗವಲ್ಲಿ,ಲಿಂಗಾಪುರ, ಬೆಳ್ಳಾವಿ, ಊರ್ಡಿಗೆರೆ  ಹೀಗೆ ಸಾಕಷ್ಟು ಕನ್ನಡ ಶಾಲೆಗಳು ಅನೇಕ ಸಾಧನೆ, ಉತ್ತಮ ಗುಣಮಟ್ಟದ ಶಿಕ್ಷಣದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿವೆ.
ಇಂತಹ ಮಾದರಿ ಶಾಲೆಗಳಿಂದ ಮಾತ್ರ ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲು ಸಾಧ್ಯವಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.