ತುಮಕೂರು: ಕಳ್ಳಂಬೆಳ್ಳ ಹೋಬಳಿಯ ಚಿನ್ನೇನಹಳ್ಳಿ, ಸೀಬಿ ಅಗ್ರಹಾರ, ಸೀಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಗ್ರಾಮಗಳು ಜೋಡಿದೇವರಹಳ್ಳಿ ಗ್ರಾಮದ ಸಮೀಪವಿರುವ ಸನ್‌ವಿಕ್ ಉಕ್ಕು ಕಾರ್ಖಾನೆಯ ಹೊಗೆಯಿಂದ ಸಂಕಷ್ಟ ಅನುಭವಿಸುತ್ತಿವೆ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ಕಾರ್ಖಾನೆಯಿಂದ ಬರುವ ಹೊಗೆ ಸುತ್ತಮುತ್ತಲ ಗ್ರಾಮಗಳ ಹೊಲಗದ್ದೆಗಳಲ್ಲಿ ಬೆಳೆಯುವ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಕಬ್ಬಿಣದ ಅದಿರಿನ ದೂಳು ಕುಳಿತು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹಾರುಬೂದಿಯು ಕಾರ್ಖಾನೆಯಿಂದ 10 ಕಿ.ಮೀ. ಸುತ್ತಳತೆವರೆಗೆ ತನ್ನ ಪ್ರತಾಪ ತೋರುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.
ಕಬ್ಬಿಣದ ದೂಳಿನಿಂದ ಕ್ಷಯ, ಕೆಮ್ಮು, ಆಸ್ತಮಾ, ಅಲರ್ಜಿ, ಶ್ವಾಸಕೋಶ, ಚರ್ಮ ಕಾಯಿಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ವನ್ಯಪ್ರಾಣಿ, ಪಕ್ಷಿ ಸಂಕುಲ, ಸಾಕುಪ್ರಾಣಿಗಳು ಮೇವಿಲ್ಲದೆ ಪರದಾಡು ತ್ತಿವೆ. ಹಸುಗಳಲ್ಲಿ ಹಾಲಿನ ಅಂಶ ಕಡಿಮೆಯಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ವರು ಸಂಕಷ್ಟ ಅನುಭವಿಸುವಂತಾಗಿದೆ. ಸೀಮೆ ಹಸುಗಳು ಪರಿಸರ ಮಾಲಿನ್ಯಕ್ಕೆ ಜೀವ ತೆರುತ್ತಿವೆ ಎಂದು ದೂರಿದ್ದಾರೆ.
ಚಿಗುರೊಡೆದ ಬೆಳೆಗಳಲ್ಲಿ ಪತ್ರಹರಿತ್ತು ತಯಾರಾಗು ತ್ತಿಲ್ಲ. ಪರಾಗಸ್ಪರ್ಶವಾಗದೆ ಕಾಳು ಕಟ್ಟುತ್ತಿಲ್ಲ. ಅಲ್ಪಸ್ವಲ್ಪ ಬೆಳೆ ಬೆಳೆದರೂ ದೂಳಿನಿಂದ ಕೂಡಿದ ಫಸಲು ಸಂಗ್ರಹಿಸಲು ಕಾರ್ಮಿಕರು ಒಪ್ಪುವುದಿಲ್ಲ. ತೆಂಗು, ಅಡಿಕೆ, ಬಾಳೆ ಬೆಳೆ ಕಾಯಿ ಕಟ್ಟದೆ ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ. ಫಸಲು ಬಾರದೆ ತರಕಾರಿ ಬೆಳೆಯುವವರೂ ಕಂಗಾಲಾಗಿದ್ದಾರೆ ಎಂದಿದ್ದಾರೆ.
ಕಾರ್ಖಾನೆಯು ಪರಿಸರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಲಾರಿಗಳ ಸಾಮರ್ಥ್ಯ ಮೀರಿ ಸರಕು ಸಾಗಿಸುವುದರಿಂದ ರಸ್ತೆಗಳು ಹಾಳಾಗಿವೆ. ಪರವಾನಗಿ ಸಂದರ್ಭದಲ್ಲಿ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಗಾಳಿಗೆ ತೂರಿ ರಾತ್ರಿ ವೇಳೆ ಅಧಿಕ ಹೊಗೆ ಬಿಡಲಾಗುತ್ತಿದೆ. 4 ಕಿ.ಮೀ ವರೆಗೆ ಕೇಳುವಷ್ಟು ಶಬ್ದ ಮಾಲಿನ್ಯ ಪ್ರತಿದಿನ ನಡೆಯುತ್ತಿದೆ ಎಂದು ದೂರಿದ್ದಾರೆ.
ಕಾರ್ಖಾನೆ ವಿರುದ್ಧ ಈ ಹಿಂದೆ ಮೂರು ಬಾರಿ ಗ್ರಾಮಸ್ಥರು ಪ್ರತಿಭಟಿಸಿದ್ದರು. ಆದರೆ ಕಾರ್ಖಾನೆ ಬಲದ ಮುಂದೆ ರೈತರ ಹೋರಾಟ ಅರಣ್ಯ ರೋದನವಾಗಿದೆ. ಕಾರ್ಖಾನೆ ಮಾಲೀಕರಿಗೆ ರಾಜಕಾರಿಣಿಗಳ ಬೆಂಬಲವಿದೆ. ಹೀಗಾಗಿ ಎಲ್ಲ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂತ್ರ ಅನುಸರಿಸಿ ಯಾರೂ ಕ್ರಮ ಕೈಗೊಳ್ಳದಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಖಾನೆಗೆ ಭೂಮಿ ನೀಡುವುದು ಬೇಡ ಎಂಬ ಪಂಚಾಯಿತಿ ಸದಸ್ಯರ ಸರ್ವಾನುಮತದ ನಿರ್ಣಯ ಉಲ್ಲಂಘಿಸಿ ಕಾರ್ಖಾನೆ ಸ್ಥಾಪಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ಗಿಡ ನೆಟ್ಟಿದ್ದ ಸ್ಥಳದಲ್ಲಿಯೇ ಕಾರ್ಖಾನೆ ಕಟ್ಟಲಾಗಿದೆ.
ಕಾರ್ಖಾನೆಯಿಂದ ಇಲ್ಲಿಯವರೆಗೆ ಆಗಿ ರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂದು ಜೋಗಿ ಹಳ್ಳಿ, ಸೀಬಿಅಗ್ರಹಾರ, ದೊಡ್ಡಆಲದಮರ, ಜೋಡಿ ದೇವರಹಳ್ಳಿ, ಒಡ್ಡರಹಟ್ಟಿ, ಹಾಲ್ದೊಡ್ಡೇರಿ, ಸಲುಪರ ಹಳ್ಳಿ, ವೆಂಕಟಾಪುರ, ದಾಸರಹಳ್ಳಿ, ಗೊಲ್ಲರಹಟ್ಟಿ, ನಂದಿಹಳ್ಳಿ, ಕೊಳಲುಕುಂಟೆ, ಕಲ್ಲಶೆಟ್ಟಿಹಳ್ಳಿ, ಉತ್ತಪ್ಪನ ಹಟ್ಟಿ, ಅಜ್ಜಯ್ಯನಪಾಳ್ಯ, ಲುಟ್ಟಹನುಮಯ್ಯನಪಾಳ್ಯ, ಅಮಲಗೊಂದಿ, ನಾಗೇನಹಳ್ಳಿ, ಚಿನ್ನೇನಹಳ್ಳಿ, ಬ್ರಹ್ಮಸಂದ್ರ, ಗೊಲ್ಲರಹಟ್ಟಿ, ನೆಲದಿಮ್ಮನಹಳ್ಳಿ, ಕಪ್ಪೇನಹಳ್ಳಿ ಗ್ರಾಮಗಳ ನೂರಾರು ರೈತರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.